Product Description
ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯದಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ.
ಕತೆಗಾರಿಕೆಯಲ್ಲಿ ತುಂಬ ದಿನಗಳ ಹಿಂದೆಯೇ ಸೀಲು ಹೊಡೆದಂಥ ಕಿಡಿಗೇಡಿ ನಿರ್ಲಿಪ್ತತೆ ಗಿಟ್ಟಿಸಿಕೊಂಡಿರುವ ಜೋಗಿ, ಇಲ್ಲಿ ತಮ್ಮ ಸ್ವಂತ ದೇಹವನ್ನೇ ಪಾತ್ರವಾಗಿಸಿ, ತಾವು ಸ್ವತಃ ತುಸು ದೂರ ನಿಂತವರಂತೆ ಪೂರ್ತಿ ಮಜಾ ತಗೊಂಡು ಬರೆದಿರುವ ಅಪರೂಪದ ಕಥನ ಇದು. ಉದ್ದೇಶಪೂರ್ವಕವಾಗಿ ಗಹನವಾದದ್ದೇನನ್ನೋ ಹೇಳಿ ತಲೆಕೆಡಿಸದೆ, ಆರಾಮಾಗಿ ಯಾವುದೋ ಸರಳ ಅನುಭವ ಹೇಳಿ, ಓದುಗ ಇನ್ಯಾವತ್ತೋ ಅನ್ನ ತಿನ್ನುವಾಗಲೋ, ಸ್ನಾನ-ಪ್ರಕ್ಷಾಲನಗಳನ್ನು ಮಾಡುವಾಗಲೋ ಮನೋದೈಹಿಕ ಆರೋಗ್ಯದ ಬಗ್ಗೆ ಸೀರಿಯಸ್ಸಾಗುವಂತೆ ಮಾಡುವಲ್ಲಿ ಈ ಕಥನ ‘ಡಾಕ್ಟರ ಚೀಟಿ’ ರೀತಿಯಲ್ಲಿ ಯಶಸ್ವಿಯಾಗಿದೆ.