Product Description
ಕಂಪ್ಯೂಟರ್ ಕುರಿತು ಕನ್ನಡದಲ್ಲಿ ಪುಸ್ತಕ ಬರೆಯಲು ಹೊರಟವರಿಗೆ ಮೊದಲು ಎದುರಾಗುವ ಪ್ರಶ್ನೆ - ಯಾವ ಹಂತದವರಿಗೆ? ಇದರ ಹಿಂದೆಯೇ ಇನ್ನೊಂದು ಪ್ರಶ್ನೆ ಏಳುತ್ತದೆ - ನಿರೂಪಣೆ ಹೇಗಿರಬೇಕು? ಈ ಹೊತ್ತು, ಬದುಕೆಲ್ಲ ಇಂಗ್ಲಿಷ್ಮಯವಾಗಿರುವಾಗ ಹೊಸತಾಗಿ ಕಂಪ್ಯೂಟರ್ ಕಲಿಯಲು ಹೊರಟವರಿಗೆ ಶುದ್ಧ ಕನ್ನಡದಲ್ಲಿ ಬರೆದು ಪದ ಪದಗಳಿಗೂ ಅರ್ಥಕ್ಕಾಗಿ ನಿಘಂಟು ಹುಡುಕುವಂತೆ ಮಾಡುವ ಭಾಷಾ ಪ್ರೇಮಿಗಳದ್ದು ಒಂದು ವರ್ಗ. ಆವರಣದಲ್ಲಿ ಇಂಗ್ಲಿಷ್ ಸಮಾನ ಪದಗಳನ್ನು ಕೊಡುತ್ತ ‘ಬರೆದು ಗೆದ್ದೇ’ ಎಂದು ಸಂಭ್ರಮಿಸುವ ಇನ್ನೊಂದು ವರ್ಗ. ಸಾಕ್ಷರರು ಎಂದರೆ ಅಕ್ಷರ ಕಲಿತವರು ಎನ್ನುವುದು ಅಡುಗೂಲಜ್ಜಿ ಕಾಲದ ವ್ಯಾಖ್ಯೆಯಾಯಿತು. ಮೊಬೈಲ್ ಫೋನ್ಗಳು ಈಗ ತಂತ್ರಜ್ಞಾನ ಮತ್ತು ಬಳಕೆದಾರರ ನಡುವಿನ ಕಂದರವನ್ನು ಹೆಚ್ಚು ಕಡಿಮೆ ಮುಚ್ಚಿಹಾಕಿಬಿಟ್ಟಿವೆ. ಅಕ್ಷರದ ಮಟ್ಟಿಗೆ ಸಾಕ್ಷರತೆ ಇಲ್ಲದವರು ಮೊಬೈಲ್ ವಿಚಾರಕ್ಕೆ ಬಂದಾಗ ಸಾಕ್ಷರರೇ. ಆದರೆ ಅಂಥದೇ ಬಿರುಗಾಳಿ ಕಂಪ್ಯೂಟರ್ ಸಾಕ್ಷರತೆಯ ಬಗ್ಗೆ ಇಂದಿಗೂ ಬೀಸಿಲ್ಲ ಎಂಬುದು ವಿಷಾದವೆನ್ನಿಸಿದರೂ ವಾಸ್ತವತೆಯೇ. ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್ವರೆಗೆ ವಿಸ್ತರಿಸಿರುವ ‘ಕಂಪ್ಯೂಟರ್ ಪ್ರಪಂಚ’ ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್ಸ್ಟ್ರಕ್ಷನ್ಸ್ಗಳನ್ನು ಕೊಡುವ ಕೃತಿ ‘ಕಂಪ್ಯೂಟರ್ ಪ್ರಪಂಚ’. ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್ಗಳಿವೆ. ವಿಶೇಷ ಮಾಹಿತಿಗಳಿವೆ