Product Description
‘ಎಪ್ಪತ್ತರ ದಶಕದ ಕಥೆ’ ಆ ದಶಕದ ವಿದ್ಯಮಾನಗಳನ್ನು ವ್ಯಕ್ತಿಗಳ ಖಾಸಗಿ ಬದುಕಿನ ಆಕಾಂಕ್ಷೆಗಳು ಮತ್ತು ತುಮುಲಗಳ ಮೂಲಕ ಗ್ರಹಿಸುವ ಪ್ರಯತ್ನ ಮಾಡುತ್ತದೆ. ಅನಂತಮೂರ್ತಿಯವರು ವಿಡಂಬನಾತ್ಮಕವಾಗಿ ಬಳಸುವ ಎಡಪಂಥೀಯ ತಾತ್ವಿಕ ಭಾಷೆ ಪಾತ್ರಗಳ ಗ್ರಹಿಕೆ-ತಿಳುವಳಿಕೆಗಳು ಎಷ್ಟು ಸವಕಲಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ, ಅದೇ ಆತ್ಮವಂಚನೆಯ ದಾರಿಯಾಗಿಯೂ ಪರಿನಮಿಸುತ್ತದೆ ಎನ್ನುವುದನ್ನು ವಿಶದಪಡಿಸುತ್ತದೆ. ಮಧ್ಯಮವರ್ಗದ ಬೂರ್ಜ್ವಾ ಬದುಕಿನ ಆಕರ್ಷಣೆಗಳ ಚಿತ್ರಣ ಕೂಡ ಇಲ್ಲಿ ಮುಖ್ಯವಾದುದು. ಎಪ್ಪತ್ತರ ದಶಕವನ್ನು ವಿಭಿನ್ನ ರೀತಿಗಳಲ್ಲಿ ನೋಡುವ ಕತೆಗಳು ಭಾರತೀಯ ಇತಿಹಾಸದಲ್ಲಿ ಸಾಕಷ್ಟು ಬಂದಿವೆ. ಅವುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಮಹಾಶ್ವೇತಾದೇವಿಯವರ ಕ್ಲಾಸಿಕ್ ಸಣ್ಣಕತೆಯಾದ ‘ದೌಪ್ದಿ’. ಕಲಾತ್ಮಕವಾಗಿಯೂ ತುಂಬಾ ಯಶಸ್ವಿಯಾದ ಆ ಕತೆ ಎಪ್ಪತ್ತರ ದಶಕವನ್ನು ರಾಜವ್ಯವಸ್ಥೆಯ ವಿರುದ್ಧ ದಂಗೆಯೇಳುತ್ತಿರುವ ಮೂಲನಿವಾಸಿಗಳ ಅನುಭವಗಳ ಮೂಲಕ, ಅವರ ಗ್ರಹಿಕೆಯ ಹಾಗೂ ಕಥನಗಳ ಮಾದರಿಗಳ ಮೂಲಕವೇ ಚಿತ್ರಿಸಲು ಪ್ರಯತ್ನಿಸುತ್ತದೆ. ಅನಂತಮೂರ್ತಿಯವರ ಪ್ರವೇಶ ಮತ್ತು ವಿಧಾನ ಬಹಳ ಭಿನ್ನವಾದುದು ಎಂದು ಸೂಚಿಸಲು ಮಹಾಶ್ವೇತಾದೇವಿಯವರ ಪ್ರಸ್ತಾಪ ಇಲ್ಲಿ ನೀಡಲಾಗಿದೆ.