Product Description
ಜಯಪ್ರಕಾಶ್ ನಾರಾಯಣ (1902-1979) ‘ಜೆಪಿ’ ಎಂಬ ಸಂಕ್ಷಿಪ್ತ ನಾಮದಿಂದ ಪ್ರಸಿದ್ಧರು. ಆಧುನಿಕ ಭಾರತದಲ್ಲಿ ‘ಸಂಪೂರ್ಣ ಕ್ರಾಂತಿ’ಗೆ ಕರೆ ನೀಡಿದ ಲೋಕನಾಯಕರು. ಸಾರ್ವಜನಿಕ ಸೇವೆಗಾಗಿ ರಾಮೋನ್ ಮ್ಯಾಗಸ್ಸೇ ಪ್ರಶಸ್ತಿ ವಿಜೇತರು. ಭಾರತ ಸರ್ಕಾರವು ಮರಣೋತ್ತರ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಿದರೆ ಬಿಹಾರವು ತನ್ನ ಪಾಟ್ನ ವಿಮಾನ ನಿಲ್ದಾಣಕ್ಕೆ ಜೆಪಿಯವರ ಹೆಸರನ್ನೇ ಇಟ್ಟಿತು.
ಜೆಪಿ ಮಾರ್ಕ್ಸಿಸ್ಟ್ ಆಗಿದ್ದರೂ ಗಾಂಧೀಜಿಯವರ ಪ್ರಭಾವಲಯದೊಳಕ್ಕೆ ಬಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅನೇಕ ಬಾರಿ ಬಂಧನಕ್ಕೆ ಒಳಗಾದರು. 60ರ ದಶಕದಲ್ಲಿ ಬಿಹಾರ ರಾಜಕೀಯವನ್ನು ಪ್ರವೇಶಿಸಿದ ಜೆಪಿ ಬಿಹಾರದಲ್ಲಿದ್ದ ಅತಿ ಬೆಲೆಯೇರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ ಇತ್ಯಾದಿಗಳನ್ನು ನೋಡಿ ಬಿಹಾರದಲ್ಲಿ ‘ಸಂಪೂರ್ಣ ಕ್ರಾಂತಿ’ಗೆ ಯಶಸ್ವೀ ಕರೆಯಿತ್ತರು.
ಜೆಪಿ ಹಾಗೂ ಪ್ರಭಾವತಿಯವರು ಮದುವೆಯಾದರೂ ಗಂಡಹೆಂಡಿರಂತೆ ಒಟ್ಟಿಗೆ ಬಾಳಿದ್ದು ಕಡಿಮೆ. ಜೆಪಿ ಮಾರ್ಕ್ಸಿಸ್ಟ್ ಆದದ್ದು, ಗಾಂಧೀವಾದಿಯಾಗಿದ್ದ ಪ್ರಭಾವತಿಯವರಿಗೆ ಹಿಡಿಸಲಿಲ್ಲ. ಆದರೂ ಸಹ ಪರಸ್ಪರ ಗೌರವವನ್ನು ಉಳಿಸಿಕೊಂಡು ದೇಶ ಸ್ವತಂತ್ರವಾಗುವವರೆಗೆ ಮಕ್ಕಳನ್ನು ಪಡೆಯುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದರು. ಆದರೆ ಸ್ವಾತಂತ್ರ್ಯ ಬರುವ ವೇಳೆಗೆ ಮಕ್ಕಳನ್ನು ಪಡೆಯುವ ವಯಸ್ಸು ಹಾಗೂ ಉತ್ಸಾಹ ಕುಗ್ಗಿಹೋಗಿತ್ತು. ಪ್ರಭಾವತಿಯವರು 1973ರಲ್ಲಿ ಕ್ಯಾನ್ಸರ್ನ ಕಾರಣ ಮರಣ ಹೊಂದಿದರು. ಜೆಪಿ ಅನಿಯಂತ್ರಿತ ಮಧುಮೇಹ, ಮೂತ್ರಪಿಂಡ ವೈಫಲ್ಯ ಹಾಗೂ ಹೃದಯಾಘಾತದಿಂದ 1979ರಲ್ಲಿ ಮೃತರಾಗುತ್ತಾರೆ.