Product Description
ಡಾ. ವಾಲ್ದಿಮರ್ ಹಾಫ್ಕಿನ್ ಕಾಲರಾ ರೋಗವನ್ನು ನಿಗ್ರಹಿಸಬಲ್ಲ ಲಸಿಕೆಯನ್ನು ರೂಪಿಸಿದಾಘ ಪ್ಯಾಶ್ಚರ್, ಮೆಚಿನ್ಕಾಫ್ ಮುಂತಾದ ಯುರೋಪಿನ ಹಿರಿಯ ವಿಜ್ಞಾನಿಗಳು ಲಸಿಕೆಯನ್ನು ಒಪ್ಪುವುದಿಲ್ಲ. ಕಾಲರಾಕ್ಕೆ ಕಾರಣವಾದ ‘ವಿಬ್ರಿಯೋ ಕಾಲರೆ’ಯನ್ನು ರಾಬರ್ಟ್ ಕಾಚ್ ಅವರು ಕಂಡುಹಿಡಿದಿದ್ದರೂ, ಕಾಲರಾಕ್ಕೆ ಅದುವೇ ಕಾರಣವೆನ್ನುವುದಕ್ಕೆ ಸಾಕಷ್ಟು ಪುರಾವೆ ಇರಲಿಲ್ಲ. ಹಾಫ್ಕಿನ್ ನೇರವಾಗಿ ಭಾರತಕ್ಕೆ ಬಂದು ಕಲ್ಕತ್ತದ ಕತ್ತಲಬಾಗಿನಲ್ಲಿ ತಮ್ಮ ಲಸಿಕೆಯನ್ನು ಪ್ರಯೋಗಿಸಿದರು. ಲಸಿಕೆಯ ಮಹತ್ವವನ್ನು ತಿಳಿಯದೆ ಸ್ಥಳೀಯ ಜನರು ಪ್ರತಿಭಟನೆಯನ್ನು ಸೂಚಿಸುತ್ತಾರೆ. ಒಂದು ಇಸ್ಲಾಮಿಕ್ ಸಂಘಟನೆಯು ಹಾಫ್ಕಿನ್ ಅವರನ್ನು ಕೊಲ್ಲುವ ವಿಫಲ ಪ್ರಯತ್ನ ನಡೆಸುತ್ತದೆ. ಇದೆಲ್ಲವನ್ನು ಕಂಡ ಹಾಫ್ಕಿನ್ ನೆರೆದ ಸಮಸ್ತ ಜನರ ಮುಂದೆ ತಮ್ಮ ತೋಳಿನ ಶರಟನ್ನು ಮೇಲೇರಿಸಿ ಕಾಲರಾ ಲಸಿಕೆಯನ್ನು ತಾವೇ ಚುಚ್ಚಿಕೊಳ್ಳುತ್ತಾರೆ! ಲಸಿಕೆ ಸುರಕ್ಷಿತವಾದದ್ದೆಂದು ನಿರೂಪಿಸುತ್ತಾರೆ. ನೆರೆದ 200 ಜನರಲ್ಲಿ 116 ಜನರು ಲಸಿಕೆಯನ್ನು ತೆಗೆದುಕೊಂಡಾಗ, ಅವರಲ್ಲಿ ಒಬ್ಬರಿಗೂ ಕಾಲರಾ ಬರಲಿಲ್ಲ!