Product Description
ಇದು ಮರಾಠಿ ಭಾಷಾ ಲೇಖಕ ದಯಾ ಪವಾರ ಬರೆದ ಆತ್ಮಕಥನ. ಪ್ರಕಟಗೊಳ್ಳುತ್ತಲೇ ಭಾರಿ ವಿವಾದ ಸೃಷ್ಟಿಸಿ ಟೀಕೆ - ವಿಮರ್ಶೆಗೊಳಗಾಗಿತ್ತು. ದಲಿತರು ವಿದ್ಯಾವಂತರಾಗಿ ನೆಲೆ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಒಂದೆಡೆ. ಅದನ್ನು ಸಹಿಸದೆ ಅವರಲ್ಲಿ ಒಡಕು ಮೂಡಿಸಿ ಕೀಳರಿಮೆ ಸೃಷ್ಟಿಸುವ ಹುನ್ನಾರಗಳು ಮತ್ತೊಂದೆಡೆ. ಈ ಮಧ್ಯೆ ಅವರ ಆತ್ಮಕಥೆಗಳೆಂದರೆ ತಂತಮ್ಮ ಬದುಕಿನ ವಿವರಗಳಲ್ಲದೆ ಬೇರೇನು ಇರಲು ಸಾಧ್ಯ ? ಯಾವುದೇ ದಲಿತ ಆತ್ಮಕಥೆ ಓದಿದಾಗ ಅಲ್ಲಿ ಸವರ್ಣೀಯರ ಬಾವಿಯಿಂದ ನೀರನ್ನೆತ್ತಿ ಕುಡಿಯಲು ಬಿಡದಿರುವ ದಾರುಣ ಪ್ರಸಂಗವೊಂದು ದಾಖಲಾಗಿರುತ್ತದೆ. ಅಸ್ಪೃಶ್ಯತೆಯ ನೋವಿನೊಂದಿಗೆ ಬಡತನದಲ್ಲಿ ನರಳಿ ಊರ ಚಾಕರಿ ಮಾಡುತ್ತ ದಿನಗಳೆಯುವುದು ಎಷ್ಟೊಂದು ಹಿಂಸೆ! ದಲಿತ ಸಮಾಜದ ಅವಸ್ಥೆಯನ್ನು ದಗಡೂ ಮಾರುತಿ ಪವಾರನಾಗಿ ಗುರುತಿಸುತ್ತಲೇ ಬಾಲ್ಯ ಕಳೆದು ಶಾಲೆಗೆ ಹೋಗುವ ಸೌಭಾಗ್ಯ ದೊರೆತು ವಿದ್ಯಾವಂತರಾಗಿ ಬಲುತ ಬರೆಯುವ ದಯಾ ಪವಾರರಾಗಿ ರೂಪುಗೊಂಡದ್ದು ಈ ಕೃತಿಯ ಹೂರಣ. ಇಲ್ಲಿ ಅಪಾರ ನೋವು - ಸಂಕಟಗಳಿವೆ. ಇದು ಅವರ ಬಾಲ್ಯದಿಂದಲೇ ಪ್ರಾರಂಭಗೊಂಡ ಕಥನವಾದರೂ ಮುಂದೆ ವಿಸ್ತರಿಸಿಕೊಳ್ಳುತ್ತ ಸಮಾಜದಲ್ಲಿ ವ್ಯವಹರಿಸಬೇಕಾದ ಎಲ್ಲ ತಾಣಗಳಿಗೂ ಹಬ್ಬಿಕೊಂಡಿದೆ.