Product Description
ಪ್ರೇಮಾಂತರ ಎಂಬ ಶೀರ್ಷಿಕೆ ಓದಿದ ತಕ್ಷಣ ಅವಾಂತರ, ಗಂಡಾಂತರ ಎಂಬ 'ಸಮಾನಾರ್ಥಕ' ಪದಗಳು ನೆನಪಾದವು. ನೀವೆಷ್ಟು ತುಂಟರೆಂದರೆ ಅಂಥ ಅರ್ಥಗಳು ಹೊಳೆಯಲಿ ಎಂದೇ ನಿಮ್ಮ ಪ್ರೇಮ ಕವನಗಳ ಸಂಕಲಕ್ಕೆ 'ಪ್ರೇಮಾಂತರ' ಎಂದು ಹೆಸರಿಟ್ಟಿರಬಹುದು. ಪ್ರೇಮ ಪವಿತ್ರವಾದದ್ದು ಎಂಬ ಹಳೆಯ ಪರಿಶುದ್ಧ ಭಾವನೆಗೆ ನೀವು ತುಂಟತನ, ಒಂಚೂರು ಪೋಲಿತನ, ಒಂದಷ್ಟು ಉಡಾಫೆ, ಒಂದು ಚಿಟಿಕೆ ತಮಾಷೆ ಬೆರೆಸಿದ್ದು ನಮ್ಮನ್ನೆಲ್ಲ ಬೆರಗಾಗಿಸಿದೆ. ಪ್ರೀತಿಯ ಕುರಿತು ಕವಿಗಳೆಲ್ಲ ಅತ್ಯಂತ ಭಾವುಕತೆಯಿಂದ ಮಾತಾಡುತ್ತಿದ್ದ ದಿನಗಳಲ್ಲಿ ನೀವು ವಿರಹ, ಅಸಾಂಗತ್ಯ, ವಂಚನೆ, ಹಂಬಲ ಮತ್ತು ಪ್ರೇಮಯಾಚನೆಯನ್ನು ಅತ್ಯಂತ ಸಹಜವಾಗಿ ಗ್ರಹಿಸಿ ಪ್ರಾಮಾಣಿಕವಾಗಿ ಕಾವ್ಯವಾಗಿಸಿದವರು. ನಿಮ್ಮ ಕವಿತೆಗಳನ್ನು ಓದಿ ಪುಲಕಗೊಳ್ಳುತ್ತಾ, ಮೈಮರೆಯುತ್ತಾ ಮತ್ತೆ ಮತ್ತೆ ಮೆಲುಕು ಹಾಕುತ್ತಾ ತಮ್ಮತಮ್ಮ ಪ್ರೇಮಾಂತರಗಳನ್ನು ಕಂಡುಕೊಂಡವರ ಪಾಲಿಗೆ ಈ ಸಂಕಲನ ಸಖೀಗೀತವೂ ಹೌದು, ದಾಂಪತ್ಯಗೀತವೂ ಹೌದು; ಕಾಮಸೂತ್ರ ಕೂಡ. ಪ್ರೇಮಕ್ಕೆ ವಿರಹಕ್ಕೆ ಅವೆರಡೂ ಕೊಡುವ ಜ್ಞಾನ, ವೈರಾಗ್ಯ ಮತ್ತು ರೋಮಾಂಚಕ್ಕಾಗಿ ಹಂಬಲಿಸುವ ನನ್ನಂಥವರಿಗೆ ನಿಮ್ಮ ಕವಿತೆಗಳು ನಿತ್ಯಸ್ಫೂರ್ತಿ. ನಿಮ್ಮ ತುಂಟತನ, ತುಡಿತ ಮತ್ತು ಹರೆಯವನ್ನು ಪೊರೆಯುವ ಕವಿತ್ವ ಮತ್ತಷ್ಟು ಕವಿತೆಗಳನ್ನು ಕೊಟ್ಟು ನಮ್ಮನ್ನು ಚಿರಯೌವನದಲ್ಲಿ ಇರಿಸಲಿ.
ಕೊಂಚ ಪ್ರೀತಿ ಹಾಗೂ ಧಾರಾಳ ಅಸೂಯೆಯಿಂದ
ಜೋಗಿ