Product Description
ಜಿ ವಿ ಆನಂದಮೂರ್ತಿಯವರ ‘ಜಾಲಾರ ಹೂವು ಮತ್ತು ಇತರ ಪ್ರಬಂಧಗಳು’ ಓದುಗರ ಮನಸ್ಸನ್ನು ತುಂಬುವಂಥ ಬರವಣಿಗೆಯನ್ನು ಒಳಗೊಂಡಿವೆ. ಕನ್ನಡದಲ್ಲಿ ಅಪರೂಪವಾಗುತ್ತಿರುವ ಲಲಿತ ಪ್ರಬಂಧಗಳೆಂಬ ಪ್ರಕಾರಕ್ಕೆ ಉತ್ತಮ ಸೇರ್ಪಡೆಯಾಗಿ ರೂಪುಗೊಂಡಿವೆ. ಬೌದ್ಧಿಕತೆಯ ಭಾರವಿಲ್ಲದೆಯೂ ಚಿಂತನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿರುವ ಅನಂದಮೂರ್ತಿಯವರ ಬರವಣಿಗೆ ಓದುಗರ ನೆನಪನ್ನು ಉದ್ದೀಪಿಸಿ ಜೋವನೋತ್ಸಾಹವನ್ನು ಮೂಡಿಸುತ್ತವೆ. ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಕೇವಲ ವ್ಯಕ್ತಿಗತ ಕಥನವಾಗದೆ ಬದಲಾಗಿರುವ ಜೀವನಕ್ರಮದ ಬಗ್ಗೆ, ಕಳೆದುಹೋಗುತ್ತಿರುವ ಹಳ್ಳಿಯ ಬದುಕಿನ ಒಟ್ಟಂದದ ಬಗ್ಗೆ ವಿಷಾದದ ಅಲೆಯನ್ನು ಎಬ್ಬಿಸುವಷ್ಟು ಶಕ್ತವಾಗಿಯೂ ಇದೆ. ಆನಂದಮೂರ್ತಿಯವರ ಬರವಣಿಗೆಯಲ್ಲಿ ಬೌದ್ಧಿಕತೆಯ ಸೋಗು ಇಲ್ಲ, ಬದಲಾಗುತ್ತಿರುವ ಜಗತ್ತಿನ ಬಗ್ಗೆ, ಕಳೆದು ಹೋಗುತ್ತಿರುವ ಬದುಕಿನ ಚೆಲುವಿನ ಬಗ್ಗೆ ನೆನಪುಗಳು ಉದ್ದೀಪಿಸುವ ‘ಇದು ಸರಿಯಲ್ಲ’ ಎಂಬ ಭಾವವನ್ನು ಓದುಗರಿಗೆ ಆಪ್ತವಾಗಿ ದಾಟಿಸುವ ಗೆಳೆಯರ ಮಾತಿನ ಗುಣ ಇದೆ. ನಮ್ಮನ್ನೆಲ್ಲ ಆವರಿಸಿಕೊಂಡಿರುವ ಆಧುನಿಕತೆಯಿಂದ ನಾವು ಪಡೆದದ್ದೆಷ್ಟು, ಕಳಕೊಂಡದ್ದೆಷ್ಟು ಅನ್ನುವ ಪರಿಶೀಲನೆಗೆ ತೊಡಗಿಸುವಂತಿದೆ.