Product Description
ಬದಲಾದ ಕಾಲದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳ ಕುರಿತು ‘ಮಹಿಳೆ: ಇಂದಿನ ಸವಾಲುಗಳು’ ಎಂಬ ಈ ಪುಸ್ತಕದಲ್ಲಿ ಅವುಗಳ ವಿವಿಧ ಆಯಾಮಗಳ ಬಗ್ಗೆ ಕನ್ನಡದ ಹಿರಿಯ ಬರಹಗಾರ್ತಿ ಡಾ. ಸಬಿಹಾ ಭೂಮಿಗೌಡ ಚಿಂತಿಸಿದ್ದಾರೆ. ಮ್ಯಾಟ್ರಿಮೋನಿಯಲ್ ಕಾಲಮ್ಮುಗಳು ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜಾತಿ ಚೌಕಟ್ಟಿನಿಂದ ಹೊರಗೆ ವಿವಾಹವನ್ನು ನೋಡಲು ವ್ಯವಸ್ಥೆ ಇನ್ನೂ ತಯಾರಾಗಿಲ್ಲ ಎನ್ನುವುದನ್ನು ತೋರಿಸುತ್ತವೆ. ಜಾತಿಮರ್ಯಾದೆ ಕಾಪಾಡುವ ನೆಪದಲ್ಲಿ ಆಗುತ್ತಿರುವ ಮರ್ಯಾದಾ ಹತ್ಯೆಗಳು ಇದರ ಇನ್ನೊಂದು ಕ್ರೂರ ಮುಖವಾಗಿದೆ. ಬದುಕಿನಲ್ಲೂ, ಬರಹದಲ್ಲೂ ಇಂತಹ ತಡೆಗೋಡೆಗಳನ್ನು ಗುರುತಿಸಿ ದಾಟುತ್ತ ಬಂದಿರುವ ಡಾ. ಸಬಿಹಾ, ಜಾತಿ/ಧರ್ಮಗಳು ಯುವ ಪೀಳಿಗೆಯ ಮದುವೆಯ ಆಯ್ಕೆಗೆ ಹೇಗೆ ತೊಡರುಗಾಲಾಗಿವೆಯೆಂದು ಚರ್ಚಿಸಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯ; ವೃತ್ತಿ ಆಯ್ಕೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ತಾರತಮ್ಯ; ಕೋಮುವಾದ ಬಲಗೊಳ್ಳುತ್ತಿರುವ ದಿನಗಳಲ್ಲಿ ಮಹಿಳೆಯರ ಆಂತರಿಕ ಮತ್ತು ಪಾಲುದಾರಿಕೆ-ಮುಂತಾದ ವಿಷಯಗಳ ಬಗ್ಗೆ ತಲಸ್ಪರ್ಶಿಯಾಗಿ ಚರ್ಚಿಸಿದ್ದಾರೆ. ಆಧುನಿಕ ಮಹಿಳೆಯ ವರ್ತಮಾನದ ಸೂಕ್ಷ್ಮ ತಲ್ಲಣಗಳನ್ನು ಗುರುತಿಸಿರುವ ಸಬಿಹಾ ಬರಹಗಳು ಯುವಪೀಳಿಗೆ ಹಾಗೂ ಮಹಿಳಾ ಅಧ್ಯಯನದಲ್ಲಿ ಆಸಕ್ತಿಯುಳ್ಳವರು ಓದಬೇಕಾದಂಥವು.