Product Description
ಗೋರಾ (ಗೋಪರಾಜು ರಾಮಚಂದ್ರರಾವ್) ಭಾರತದ ಖ್ಯಾತ ವಿಚಾರವಾದಿ, ನಿರೀಶ್ವರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ. ಸಸ್ಯಶಾಸ್ತ್ರ ಉಪನ್ಯಾಸಕ ಸ್ಥಾನದಿಂದ ಚ್ಯುತರಾದ ಮೇಲೆ ‘ನಾಸ್ತಿಕವಾದಿ ಕೇಂದ್ರ’ವನ್ನು ಆರಂಭಿಸಿದರು. ತೆಲುಗಿನಲ್ಲಿ ‘ನಾಸ್ತಿಕತ್ವಮು: ದೇವುದು ಲೇದು’ ಎನ್ನುವ ಪುಸ್ತಕವನ್ನು ಬರೆದರು. ‘ಧನಾತ್ಮಕ ನಾಸ್ತಿಕವಾದ’ವನ್ನು ಪ್ರಚುರಪಡಿಸಿದರು. ಡಿಸೆಂಬರ್ 22, 1972ರಲ್ಲಿ ಪ್ರಥಮ ‘ವಿಶ್ವ ನಾಸ್ತಿಕ ಸಮ್ಮೇಳನ’ವನ್ನು ನಡೆಸಿದರು. ಸರ್ವಸಮಾನತೆ ಹಾಗೂ ಸರ್ವೋದಯ ತತ್ತ್ವದಲ್ಲಿ ನಂಬಿಕೆಯನ್ನಿಟ್ಟಿದ್ದ ಗೋರಾ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಮಡದಿ ಹಾಗೂ 18 ತಿಂಗಳ ಮಗನೊಂದಿಗೆ ಜೈಲನ್ನು ಸೇರಿದರು. ಮಹಾತ್ಮ ಗಾಂಧಿಯೊಡನೆ ನಡೆಸಿದ ಚರ್ಚೆಗಳು ‘ಆನ್ ಅಥೀಸ್ಟ್ ವಿತ್ ಗಾಂಧಿ’ ಎನ್ನುವ ಪುಸ್ತಕದಲ್ಲಿ ಪ್ರಕಟವಾಗಿದೆ. ಪಕ್ಷರಹಿತ ಪ್ರಜಾಪ್ರಭುತ್ವದ ಅಗತ್ಯವನ್ನು ಮನಗಂಡ ಗೋರಾ 1952ರಲ್ಲಿ ಹಾಗೂ 1967ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಗೋರಾ ಅವರ ವಿಚಾರಗಳು ಸಮಕಾಲೀನ ಸಮಾಜಕ್ಕಿಂತ ಬಹಳ ಮುಂದುವರೆದಿದ್ದ ಕಾರಣ ಅವರು ಸೋಲಬೇಕಾಯಿತು!