Product Description
“ಲೇಖಕನ ವಿಡಂಬನೆ ಎಂದರೆ ತಾನು ಬರೆದಿದ್ದನ್ನು ಅವನು ಹರಿದೆಸೆಯಲಾರೆ” ಎಂದ ಭೀಷ್ಮ ಸಾಹನಿಯವರು ಹಿಂದಿ ಸಾಹಿತ್ಯದ ಪ್ರಸಿದ್ಧ ಸಾಹಿತಿ. ೧೯೪೭ರ ನಂತರದ ಪ್ರಸಿದ್ಧ ಕಥೆಗಾರರಲ್ಲಿ ಭೀಷ್ಮ ಸಾಹನಿಯವರು ಪ್ರಮುಖರು. ಹಿಂದಿ ಕಾದಂಬರಿ ಕ್ಷೇತ್ರದಲ್ಲಿ ಪ್ರೇಮಚಂದರ ಉತ್ತರಾಧಿಕಾರಿಗಳಾಗಿರುವ ಭೀಷ್ಮ ಸಾಹನಿಯವರು ತಮ್ಮ ಹದಿನಾರನೆ ವಯಸ್ಸಿಗೇ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದರು. ಅವರ ಮೊದಲ ಕಥೆ ‘ನೀಲಿ ಕಣ್ಣುಗಳು’ ಹಂಸ ಪತ್ರಿಕೆಯಲ್ಲಿ ಅಚ್ಚಾಯಿತು. ಭೀಷ್ಮ ಸಾಹನಿಯವರು ತಮ್ಮ ಕಥೆಗಳಲ್ಲಿ ಸ್ವಾತಂತ್ರ್ಯಕ್ಕೂ ಮೊದಲಿನ ಹಾಗೂ ಸ್ವಾತಂತ್ರ್ಯದ ನಂತರದ ಭಾರತದ ಚಿತ್ರಣವನ್ನು ತೋರಿಸಲು ಬಯಸುತ್ತಿದ್ದರು.
ಭೀಷ್ಮ ಸಾಹನಿಯವರ ಅತ್ಯಂತ ಪ್ರಸಿದ್ಧ ಕಾದಂಬರಿ ‘ತಮಸ್’ ಟೆಲಿಫಿಲ್ಮ್ ಆಗಿ ಭಾರತದ ಉದ್ದಗಲಗಳಲ್ಲಿ ಹೆಸರು ಮಾಡಿತು. ‘ತಮಸ್’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿತು. ಭಾರತ-ಪಾಕಿಸ್ತಾನ ವಿಭಜನೆಯಿಂದಾಗಿ ತಮ್ಮ ಮನೆ-ಮಠಗಳನ್ನು ತೊರೆದ ಲಕ್ಷಾಂತರ ಜನರ ತೀವ್ರ ಸಂಘರ್ಷದ ಕಥೆಯುಳ್ಳ ‘ತಮಸ್’ ಕಾದಂಬರಿಯಲ್ಲಿ ಧರ್ಮಾಂಧತೆ, ಅಮಾನವೀಯತೆ ಮತ್ತು ಕ್ರೂರತೆಯನ್ನು ವಾಸ್ತವ ಚೌಕಟ್ಟಿನಲ್ಲಿ ಸೆರೆಹಿಡಿಯಲಾಗಿದೆ.
ಇಂದು ದೇಶದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹಿಂಸೆಯನ್ನು ಉದ್ರೇಕಿಸುವಂತಹ ಘಟನೆಗಳು ತಲೆಯೆತ್ತುತ್ತಿವೆ. ಎಲ್ಲೆಡೆಯಲ್ಲಿ ಸಾಮರಸ್ಯ ಮತ್ತು ಮಾನವ ಪ್ರೀತಿಯನ್ನು ಜಾಗೃತಗೊಳಿಸುವ ಅಗತ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ಭೀಷ್ಮ ಸಾಹನಿಯವರ ಲೇಖನಗಳು, ನಾಟಕಗಳು, ಕಾದಂಬರಿಗಳು ಮತ್ತು ಕಥೆಗಳ ಮಹತ್ವ ಅತ್ಯಧಿಕವಾಗುತ್ತದೆ.