Product Description
ವೆಂಕಟರಾಮಾ ಪಂಡಿತ ಕೃಷ್ಣಮೂರ್ತಿ (1923-2014) ವಿ.ಕೆ. ಮೂರ್ತಿ ಎಂದೇ ಭಾರತೀಯ ಚಲನಚಿತ್ರರಂಗದಲ್ಲಿ ಪರಿಚಿತರು. ಮೂರ್ತಿಯವರು ಚಲನಚಿತ್ರ ಛಾಯಾಗ್ರಾಹಕರಾಗಿ ಮಾಡಿದ ಅದ್ಭುತ ಸಾಧನೆಗೆ ಅವರಿಗೆ 2008ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆಯಿತು. ಮೂರ್ತಿ ಎಂದ ಕೂಡಲೇ ಮತ್ತೋರ್ವ ಕನ್ನಡಿಗ ನಿರ್ದೇಶಕ ಹಾಗೂ ನಟ ಗುರುದತ್ ನೆನಪಾಗಲೇಬೇಕು! ಎಲ್ಲಿಯವರೆಗೆ ಮೂರ್ತಿಯ ಹೆಸರಿರುತ್ತದೆಯೋ ಅಲ್ಲಿಯವರೆಗೆ ಗುರುದತ್ ಹೆಸರಿರುತ್ತದೆ. ಎಲ್ಲಿಯವರೆಗೆ ಗುರುದತ್ ಹೆಸರಿರುತ್ತದೆಯೋ ಅಲ್ಲಿಯವರೆಗೂ ಮೂರ್ತಿಯ ಹೆಸರಿರುತ್ತದೆ. ಗುರುದತ್ ಅವರ ಚಿತ್ರಗಳಿಗೆ ಜೀವ ತುಂಬಿದವರೇ ನಮ್ಮ ಮೂರ್ತಿ!
ಮೈಸೂರಿನಲ್ಲಿ ಹುಟ್ಟಿದ ಮೂರ್ತಿಯವರು ಶಾಲಾ ಶಿಕ್ಷಣದೊಡನೆ ಪಿಟೀಲು ನುಡಿಸುವುದನ್ನು ಕಲಿತರು. ಕುವೆಂಪು ಅವರ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರು ‘ಬುಲ್ ಬುಲ್ ತರಂಗ್’ ಕೊಳ್ಳಲು ಮೂರ್ತಿಯವರಿಗೆ ರೂ.40 ಕೊಟ್ಟಿದ್ದರಂತೆ. ವಿದ್ಯಾರ್ಥಿಯಾಗಿ 1943ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಬಹಳ ಕಷ್ಟಪಟ್ಟು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ‘ಸಿನಿಮಾಟೊಗ್ರಫಿ’ ಕಲಿತು ಮುಂಬೈ ಸೇರಿದರು. ಮೂರ್ತಿಯವರು ನಿಧಾನವಾಗಿ ಸಹಾಯಕ ಛಾಯಾಗ್ರಾಹಕನಾಗಿ ಕೆಲಸವನ್ನಾರಂಭಿಸಿದರು. ದೇವಾನಂದ್ ನಾಯಕನಾಗಿ ನಟಿಸಿದ ‘ಬಾಜಿ’ ಚಿತ್ರವನ್ನು ಗುರುದತ್ ನಿರ್ದೇಶಿಸುತ್ತಿದ್ದರು. ಅಲ್ಲಿ ಮೂರ್ತಿಯವರ ಛಾಯಾಗ್ರಹಣದ ಕೈಚಳಕವನ್ನು ನೋಡಿ ಮುಂದಿನ ತಮ್ಮೆಲ್ಲ ಚಿತ್ರಗಳಿಗೂ ಮೂರ್ತಿಯವರನ್ನೇ ಕ್ಯಾಮರಾಮನ್ ಆಗಿ ಆಯ್ಕೆ ಮಾಡಿಕೊಂಡರು. ಮೂರ್ತಿಯವರಿಗೆ ‘ಫಿಲಂಫೇರ್’ ಪ್ರಶಸ್ತಿಯನ್ನು ತಂದುಕೊಟ್ಟರು. ಹಾಗೆಯೇ ‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರವೂ ಸಹ! ಕನ್ನಡದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ‘ಹೂವು ಹಣ್ಣು’ ಚಿತ್ರಕ್ಕೆ ಮೂರ್ತಿಯವರು ಛಾಯಾಗ್ರಹಣವನ್ನು ಮಾಡಿದರು.