Product Description
ಎ ಕೆ ರಾಮಾನುಜನ್ ಹೇಳಿದಂತೆ ಕಣ್ಣೆದುರಿಗಿರುವುದನ್ನು ಕಾಣುವುದಕ್ಕೂ ಅದೃಷ್ಟ ಬೇಕು. ಛಾಯಾಚಿತ್ರಗಾರನಿಗೆ ಈ ಮಾತು ಇನ್ನಷ್ಟು ಚೆನ್ನಾಗಿ ಒಪ್ಪುತ್ತದೆ. ಬದುಕಿನ ಅನಂತ ಕ್ಷಣಗಳಲ್ಲಿ ದಿಢೀರನೆ ಸಿಕ್ಕಿಬಿಡುವ ಕೆಲವು ಅಮೂಲ್ಯ ಹಾಗೂ ಸುಂದರ ಫ್ರೇಮ್ಗಳನ್ನು ಸೆರೆಹಿಡಿಯಲು ಸಾಧ್ಯವಾಗುವುದು ಅಂಥ ಅದೃಷ್ಟದಿಂದಲೇ. ಇದು ಭಾವವಿನಯದ ರೂಪವೂ ಹೌದು. ನಿಸರ್ಗವೆಂಬುದು ಒಂದು ಅಕ್ಷಯ ಚಿತ್ರಕೂಟ. ತೆಗೆದಷ್ಟೂ ಕೌತುಕಮಯ ದೃಶ್ಯಗಳು ಮೂಡುತ್ತಲೇ ಇರುತ್ತವೆ. ಹವ್ಯಾಸಿ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನರಿಗೆ ಆ ಹಾದಿಯಲ್ಲಿ ಎದುರಾದ ಹಕ್ಕಿ, ಹೂವು, ಚಿಟ್ಟೆ, ಕೀಟಗಳನ್ನೆಲ್ಲ ಈ ಪುಸ್ತಕದಲ್ಲಿ ನೀವು ಭೇಟಿಯಾಗಬಹುದು. ಅವುಗಳ ಕತೆಯನ್ನೂ ಕೇಳಬಹುದು. ಥಟ್ಟನೆ ಪ್ರತ್ಯಕ್ಷವಾಗಿ ಸಟ್ಟನೆ ಅಂತರ್ಧಾನವಾಗುವ ಈ ಅತಿಥಿಗಳ ಚಿತ್ರಬಂಧನ ಸುಲಭವಲ್ಲ. ಅವು ಸೂಕ್ತ ಬೆಳಕಿಲ್ಲದಾಗಲೋ, ಅಂದಗೆಡಿಸುವ ಹಿನ್ನೆಲೆಯಲ್ಲಿಯೋ, ಕ್ಯಾಮೆರದಲ್ಲಿ ಬ್ಯಾಟರಿ ಖಾಲಿಯಾದಾಗಲೋ ಮುಖ ತೋರಿ ಕಣ್ಣು ಮಿಟುಕಿಸುವುದೇ ಹೆಚ್ಚು. ತಾಳ್ಮೆಯಿಂದ ಇವನ್ನೆಲ್ಲ ಸಹಿಸಿಕೊಂಡು ಚೆಂದದ ಚಿತ್ರವೊಂದನ್ನು ಹಿಡಿಯುವುದು ಒಂದು ಪುಟ್ಟ ತಪಸ್ಸೆ! ಇದು ಮಲ್ಲಿಕಾರ್ಜುನರ ಕಣ್ಣು ಹಾಗೂ ಮನಸ್ಸಿಗೆ ಒಲಿದಿದೆ.