Product Description
ತಾಲಿಬಾನ್ ಉಗ್ರಗಾಮಿಗಳು ಇಡೀ ಸ್ವಾತ್ ಕಣಿವೆಯನ್ನೇ ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಾಗ, ಒಬ್ಬೇ ಒಬ್ಬ ಬಾಲಕಿ ಮಾತ್ರ ಅದರ ವಿರುದ್ಧ ದನಿ ಎತ್ತಿದಳು. ಆ ಉಗ್ರರು ಇವಳಿಗೆ ತೆಪ್ಪಗಿರುವಂತೆ ಬೆದರಿಕೆ ಹಾಕಿದರೂ ಅವಳು ಮಾತ್ರ ಜಗ್ಗಲಿಲ್ಲ. ಬದಲಿಗೆ ತನ್ನ ಶಿಕ್ಷಣದ ಹಕ್ಕಿಗಾಗಿ ಹೋರಾಡಿದಳು. ಆದರೆ 2012ರ ಅಕ್ಟೋಬರ್ 9ನೇ ತಾರೀಖು ಈ ದಿಟ್ಟ ಬಾಲಕಿಯ ಪಾಲಿಗೆ ಕರಾಳ ದಿನವಾಯಿತು. ಅಂದು ಈಕೆ ಸ್ಕೂಲಿನಿಂದ ಮನೆ ಬರುತ್ತಿದ್ದಾಗ ತಾಲಿಬಾನ್ ಉಗ್ರರು ಈಕೆಯ ಮೇಲೆ ಗುಂಡಿನ ಮಳೆಗರೆದರು. ಅವತ್ತು ಎಲ್ಲರೂ ಮಲಾಲಾಳ ಕತೆ ಮುಗಿಯಿತು ಎಂದುಕೊಂಡರು.
ಆದರೆ, ಪವಾಡವೆಂಬಂತ ಮಲಾಲಾ ಬದುಕುಳಿದಳು. ಪಾಕಿಸ್ತಾನದ ಒಂದು ತೀರಾ ಹಿಂದುಳಿದ ಪ್ರದೇಶದಿಂದ ಶುರುವಾದ ಈಕೆಯ ಬದುಕಿನ ಪಯಣವು ನಂತರ ಇವಳನ್ನು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವವರೆಗೂ ಕೊಂಡೊಯ್ಯಿತು. ಸಂಘಟಿತ ರಾಕ್ಷಸ ಪ್ರವೃತ್ತಿಯ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಮಲಾಲಾ ಈಗೊಂದು ಅನ್ವರ್ಥ ನಾಮ. ಇಷ್ಟೇ ಅಲ್ಲ, ಹದಿನೇಳನೇ ವರ್ಷಕ್ಕೇ ನೊಬೆಲ್ ಶಾಂತಿ ಪುರಸ್ಕಾರ ಕೂಡ ಈಕೆಯನ್ನು ಹುಡೂಕಿಕೊಂಡು ಬಂದಿದೆ.
‘ನಾನು ಮಲಾಲಾ’ ಆತ್ಮಕತೆಯು ಭಯೋತ್ಪಾದನೆಯಿಂದ ಬೀದಿಗೆ ಬಿದ್ದ ಒಂದು ಕುಟುಂಬದ ಕತೆಯನ್ನು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಹೋರಾಟವನ್ನು ಮತ್ತು ಗಂಡು ಮಕ್ಕಳಿಗೇ ಮಣೆ ಹಾಕುವ ಒಂದು ಸಮಾಜದಲ್ಲಿ ತಮ್ಮ ಮಗಳ ಬಗ್ಗೆ ಈಕೆಯ ತಂದೆ-ತಾಯಿ ತೋರಿಸಿದ ಕಟ್ಟಕ್ಕರೆಯ ಜೊತೆಗೆ ಇನ್ನೂ ಹಲವು ಕಥೆಗಳನ್ನು ತೆರೆದಿಟ್ಟಿದೆ. ಅನ್ಯಾಯ ಮತ್ತು ಕೇಡಿನ ವಿರುದ್ಧ ಕೇವಲ ಒಬ್ಬ ವ್ಯಕ್ತಿಯ ದನಿಯೇ ಅಂತಿಮವಾಗಿ ಇಡೀ ಜಗತ್ತನ್ನು ಬದಲಾಯಿಸಬಲ್ಲದು ಎನ್ನುವ ನಂಬಿಕೆಯನ್ನು ಇದು ಹುಟ್ಟಿಸುತ್ತದೆ.