Product Description
ಈ ದಿನಗಳಲ್ಲಿ ಫ್ರಿಡ್ಜು, ವಾಷಿಂಗ್ ಮೆಷೀನು, ಟಿವಿ, ಮೈಕ್ರೋವೇವ್ ಒವೆನ್, ಇಂಡಕ್ಷನ್ ಒಲೆ, ಇತ್ಯಾದಿ ವಿದ್ಯುತ್ ಸಾಧನಗಳಲ್ಲಿ ಕನಿಷ್ಠ ಪಕ್ಷ 2-3 ವಿದ್ಯುತ್ ಸಾಧನಗಳು ಇಲ್ಲದಿರುವ ಮನೆಗಳೇ ಇಲ್ಲ. ಕೆಲವು ಮನೆಗಳಲ್ಲಂತೂ ಈ ಎಲ್ಲ ಸಾಧನಗಳನ್ನೂ ಕಾಣಬಹುದು. ಇವೆಲ್ಲಾ ಸಾಧ್ಯವಾಗಿರುವುದು ವಿದ್ಯುನ್ಮಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ ಅರವಾಹಕಗಳಿಂದ. ಹೀಗಾಗಿಯೇ ಅರೆವಾಹಕಗಳ ಭೌತಶಾಸ್ತ್ರ ತತ್ವಗಳನ್ನು ಅರಿಯುವುದು ಅತ್ಯಂತ ಸೂಕ್ತವಾಗುತ್ತದೆ. ಇದೇ ರೀತಿ ಇಂದು ಮೊಬೈಲ್, ಅಂತರಜಾಲ ಸೇವೆಗಳು ಮಾನವನ ಸಂಪರ್ಕ ಕ್ಷೇತ್ರವನ್ನು ವಿಸ್ತರಿಸುತ್ತಿವೆ ಹಾಗೂ ಇಡೀ ವಿಶ್ವವನ್ನು ಸಂಕುಚಿತಗೊಳಿಸಿದೆ. ವಿಶ್ವದ ಒಂದು ಮೂಲೆಯಲ್ಲಿ ಇರುವ ಜನ ಮತ್ತೊಂದು ಮೂಲೆಯ ಜನರನ್ನು ಮಾತನಾಡಿಸುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಹೊಂದುತ್ತಿರುವ ಸಂಪರ್ಕ ಕ್ಷೇತ್ರದ ಹಿನ್ನೆಲೆ, ಅದು ಸಾಗುತ್ತಿರುವ ಮಾರ್ಗಗಳನ್ನು ತಿಳಿದುಕೊಳ್ಳುವುದೂ ಇಂದಿಗೆ ಅತ್ಯಂತ ಸೂಕ್ತ ಎನಿಸುತ್ತದೆ. ಆದ್ದರಿಂದಲೇ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ವಿದ್ಯುನ್ಮಾನ ವಿಜ್ಞಾನದ ಅಧ್ಯಯನ ಸಾಕಷ್ಟು ಬೇಡಿಕೆಯಲ್ಲಿದೆ ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿ ವಿದ್ಯುನ್ಮಾನ ವಿಜ್ಞಾನ ಕ್ಷೇತ್ರದ ಮೂಲತತ್ವಗಳನ್ನು ಸ್ಪಷ್ಟವಾಗಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.