Product Description
ಅಂತರಿಕ್ಷ ಎಷ್ಟು ವಿಶಾಲ, ಎಷ್ಟು ಅಗಾಧ, ಎಷ್ಟು ಅನಂತ! ನೋಡಲೇ ಬಲು ಸೊಗಸು. ಮಹದದ್ಭುತ. ಅದರ ಅಷ್ಟು ವಿಶಾಲವಾದ ಹರವೂ ಬರಿದೋ ಬರಿದು. ಅದೊಂದು ನಿಗೂಢ ವೈಚಿತ್ರ್ಯ. ಅದನ್ನು ಮಾನವ ಅನಾದಿಕಾಲದಿಂದಲೂ ಭಯಭಕ್ತಿಗಳಿಂದ ನೋಡುತ್ತ ಬಂದಿದ್ದಾನೆ. ಅದು ತನ್ನೆಲ್ಲ ರಹಸ್ಯಗಳನ್ನೂ ಎಂದಾದರೂ ಬಯಲು ಮಾಡೀತೆ? ಮಾಡಿದರೂ ಅದು ತನ್ನ ವಿಶ್ವರೂಪ ದರ್ಶನ ಮಾಡಿಸಲು ಇನ್ನೂ ಎಷ್ಟು ಜ್ಯೋತಿರ್ವರ್ಷಗಳು ಬೇಕೋ. ಆದರೂ ಮಾನವನ ಅಂತಃಪ್ರತಿಭೆ ಅದರ ಕೊನೆಯಪಕ್ಷ ಕೆಲವು ರಹಸ್ಯಗಳನ್ನಾದರೂ ಬಯಲು ಮಾಡಿದೆ. ಅಂಥ ಅಂತರಿಕ್ಷದ ಆಳಗಳೊಳಕ್ಕೆ ಮುಳುಗಿ ಅಲ್ಲಿನ ಕೌತುಕಗಳ ಅಲ್ಪ ಅರಿವನ್ನಾದರೂ ಪಡೆಯಲು ತಜ್ಞನಲ್ಲದ ಶ್ರೀಸಾಮಾನ್ಯನಿಗೂ ಸಾಧ್ಯಮಾಡಿಕೊಡುವಂತೆ ಈ ಕಿರುಹೊತ್ತಗೆಯನ್ನು ಸರಳ ಭಾಷೆ ಶೈಲಿಗಳಲ್ಲಿ ರಚಿಸಲಾಗಿದೆ, ವಿವರಣಾ ಚಿತ್ರಗಳನ್ನು ಪುಟಪುಟಗಳಲ್ಲೂ ತುಂಬಿಸಿದೆ. ಹಕ್ಕಿಯಂತೆ ಹಾರಬೇಕು, ಅಜ್ಞಾತದ ಒಳಹೊಕ್ಕು ಅದರ ಅಂತರಂಗವನ್ನು ಶೋಧಿಸಬೆಕು ಅನ್ನುವುದು ಆದಿಕಾಲದಿಂದಲೂ ಮಾನವನಲ್ಲಿ ಬೆಳೆದುಬಂದಿರುವ ಉತ್ಕಟೇಚ್ಛೆ. ಅದು ಅವನನ್ನು ಅರಿವಿರದ ನಾನಾ ಹಾದಿಗಳಲ್ಲಿ ಕರೆದೊಯ್ದಿದೆ. ಅವೆಲ್ಲವುಗಳ ಸೂಕ್ಷ್ಮ ಪರಿಚಯ ನೀಡಿ ಈ ಕೃತಿ ಅವನು ಇಂದು ಅಂತರಿಕ್ಷದ ಬಗೆಗೆ ಎಂಥ ಜ್ಞಾನದ ಆಣಿಮುತ್ತುಗಳನ್ನು ಸಂಗ್ರಹಿಸಿದ್ದಾನೆಂಬ ಬಗೆಗೆ ವಿವರವಾಗಿ ತಿಳಿಸುತ್ತದೆ. ರಾಕೆಟ್ಟುಗಳನ್ನು, ಅಂತರಿಕ್ಷನೌಕೆಗಳನ್ನು ಹೇಗೆ ನಿರ್ಮಿಸಲಾಯಿತು ಎಂಬುದನ್ನು ಹಂತಹಂತವಾಗಿ ತಿಳಿಸಿ ಈ ಕೃತಿ ಮಾನವನ ಅಂತರಿಕ್ಷ ಯಾತ್ರೆಹಲ್ಲಿ ಎಷ್ಟು ಗಂಡಾಂತರಗಳುಂಟು, ಜೊತೆಗೇ ಎಂಥ ಮಹದಾನಂದವೂ ಉಂಟು ಎಂಬುದನ್ನು ವಿವರಿಸುತ್ತದೆ. ಇಂದಷ್ಟೆ ಅಲ್ಲ, ನಾಳೆ ಹಾಗೂ ದೂರ ಭವಿಷ್ಯತ್ತಿನಲ್ಲಿ ಹೇಗೆ ಮತ್ತು ಎಂಥ ಅಂತರಿಕ್ಷ ನಿಲ್ದಾಣಗಳು ನಿರ್ಮಿಸಲ್ಪಡುವುವು,ಹೇಗೆ ಅಂತರಿಕ್ಷ ಅಕ್ಷರಶಃ ಮಾನವನ ನಿವಾಸ ಸ್ಥಾನವಾಗಲಿರುವುದು ಎಂಬ ಮುನ್ನೋಟವನ್ನೂ ಈ ಕೃತಿ ಒದಗಿಸುತ್ತದೆ.