Product Description
ಭಾರತ ರತ್ನ ಪಂ. ಭೀಮಸೇನ ಜೋಶಿಯವರಂತಹ ಮೇರು ವ್ಯಕ್ತಿತ್ವಕ್ಕೆ ಅನೇಕ ಆಯಾಮಗಳು, ಅನೇಕ ಬಣ್ಣಗಳು. ಒಂದೊಂದೂ ಒಮ್ದಕ್ಕಿಂತ ಭಿನ್ನ, ಇನ್ನೊಂದಕ್ಕಿಂತ ಗಾಢ. ತಾಯಿ-ತಂದೆಯ ಮುದ್ದಿನ ಮಗ, ಪತ್ನಿಯ ರಸಿಕ ಪತಿ, ತಮ್ಮಂದಿರ ಒಲವಿನ ಅಣ್ಣ, ಹೀಗೆ ಕುಟುಂಬದ ಬಣ್ಣಗಳಾದರೆ ಜನರ ಪ್ರೀತಿಯ ಗಾಯಕ, ‘ಭಾರತ ರತ್ನ’, ಒಬ್ಬ ಒಳ್ಳೆಯ ಮಾನವ, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಆದರೆ ಶ್ರೀ ರಾಘವೇಂದ್ರ ಜೋಶಿಯವರ ‘ಭೀಮಣ್ಣ’-‘ಹಾಡಾಂವನ ಹುಡುಗ’ನ ಕಣ್ಣಿಗೆ ಕಂಡ ಭೀಮಸೇನನ ಬಗ್ಗೆ ಒಂದು ಹೊಸ ಆಯಾಮವಿದೆ, ದೃಷ್ಟಿಕೋನವಿದೆ. ಪ್ರೀತಿ, ಸ್ವರಗಳ ಹಸಿವೆಯಿಂದ ತಂದೆಯನ್ನು ಆರಾಧಿಸುವ ಮಗನ ಚಿತ್ರಣವಿದೆ. ತಂದೆ ಮಗನ ಬಾಂಧವ್ಯದ ನವರಾಗದ ಆಲಾಪವಿದೆ. ಅಪ್ಪ ಮಗನ ಮುನಿಸಿನ ತಾಲ ಲಯವಿದೆ.
ಪಂ. ಭೀಮಸೇನರ ವ್ಯಕ್ತಿಚಿತ್ರಣ ಕೊಡುವುದು ಸಾಮಾನ್ಯ ಮಾತಲ್ಲ. ಆದರೆ ಮಗನ ಪ್ರೀತಿಗೆ ಯಾವದೂ ಅಸಾಧ್ಯವಲ್ಲ ಎನ್ನುವುದನ್ನು ರಾಘವೇಂದ್ರ ಜೋಶಿಯವರು ತಮ್ಮ ‘ಭೀಮಣ್ಣನ ಮಗ’ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ. ನಮಗೆಲ್ಲರಿಗೂ ಗೊತ್ತಿಲ್ಲದ ‘ಭೀಮಣ್ಣ’ರ ಅನೇಕ ರೂಪಗಳನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಸದಾ ಕಾಲ ಸ್ವರಗಳಲ್ಲಿಯೇ ಮುಳುಗಿರುತ್ತಿದ್ದ ಆ ‘ನಾದಭಾಸ್ಕರ’ ಅಷ್ಟೇ ನಿಷ್ಣಾತ ತಂತ್ರಜ್ಞ, ಪ್ರಾಣಿಪ್ರಿಯ, ಬಲಶಾಲಿ, ಧೈರ್ಯವಂತ ಮುಂತಾದ ‘ಭೀಮಣ್ಣ’ರ ಅಡಗಿದ ರೂಪಗಳನ್ನು ತೋರಿಸಿದ್ದಾರೆ.