- ರಾಮಾಯಣಗಳಲ್ಲೆಲ್ಲ ಹಳೆಯದೂ ಹೆಚ್ಚು ಜನರು ಓದುವಂಥದೂ ಆದ ವಾಲ್ಮೀಕಿಯ 'ರಾಮಾಯಣ'ವು ಅನೇಕ ಸಂಸ್ಕೃತಿಗಳಲ್ಲಿ ಬಳಕೆಯಲ್ಲಿರುವ ಅನೇಕ ರಾಮಾಯಣದ ಆವೃತ್ತಿಗಳಿಗೆ ಆಧಾರವಾಗಿದೆ. ಈ ಕೃತಿಯು ಅನೇಕ ಪೂರ್ಣ ಮತ್ತು ಅಪೂರ್ಣ ಹಸ್ತಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ಅತ್ಯಂತ ಹಳೆಯದು ೧೧ನೆಯ ಶತಮಾನದ್ದು.[೧] ವಾಲ್ಮೀಕಿ ರಾಮಾಯಣದ ಪ್ರಸ್ತುತ ಪ್ರತಿಯು ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಎರಡು ಪ್ರಾದೇಶಿಕ ಆವೃತ್ತಿಗಳ ರೂಪದಲ್ಲಿ ನಮಗೆ ಲಭ್ಯವಾಗಿದೆ . ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳುಕಾಂಡಗಳಾಗಿ ವಿಭಜಿಸಲಾಗುತ್ತದೆ .
- ಬಾಲಕಾಂಡ – ರಾಮನ ಜನನ, ಬಾಲ್ಯ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ ಕಳೆದ ದಿನಗಳು, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ- ಈ ಘಟನೆಗಳನ್ನು ಇದು ಒಳಗೊಂಡಿದೆ.
- ಅಯೋಧ್ಯಾ ಕಾಂಡ – ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣ ಹೊಂದುತ್ತಾನೆ.
- ಅರಣ್ಯ ಕಾಂಡ – ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣ ಈ ಭಾಗದಲ್ಲಿ ಚಿತ್ರಿತವಾಗಿದೆ.
- ಕಿಷ್ಕಿಂಧಾ ಕಾಂಡ – ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂಧೆ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ಕಪಿವೀರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ.
- ಸುಂದರ ಕಾಂಡ – ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರೆ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮುದ್ರ ಲಂಘನ ಮಾಡಿ ಲಂಕೆ ಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನುರಾಮನಿಗೆ ತಿಳಿಸುತ್ತಾನೆ.
- ಯುದ್ಧ ಕಾಂಡ - ಈ ಭಾಗದಲ್ಲಿ ರಾಮ - ರಾವಣರ ಯುದ್ಧದಲ್ಲಿ, ರಾವಣ ಸಂಹಾರದ ನಂತರ ರಾಮ ತನ್ನ ಪರಿವಾರದೊಡನೆ ಅಯೋಧ್ಯೆಗೆ ಹಿಂತಿರುಗುತ್ತಾನೆ. ಅಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯುವುದರ ಕುರಿತಾದ ವರ್ಣನೆಗಳಿವೆ.
- ಉತ್ತರ ಕಾಂಡ – ರಾಮ, ಸೀತೆ ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು. ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ರಾಮ ಕಾಡಿಗಟ್ಟುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ.
ವಾಲ್ಮೀಕಿ ರಾಮಾಯಣದ ಮೊದಲ ಮತ್ತು ಕಡೆಯ ಕಾಂಡಗಳನ್ನು ವಾಲ್ಮೀಕಿಯೇ ಬರೆದಿರುವುದರ ಬಗ್ಗೆ ಸಂದೇಹಗಳಿವೆ. ಈ ಎರಡು ಅಧ್ಯಾಯಗಳು ಮತ್ತು ಉಳಿದ ಭಾಗದ ನಡುವೆ ಶೈಲಿಯಲ್ಲಿ ವ್ಯತ್ಯಾಸ ಮತ್ತು ಕಥೆಯಲ್ಲಿ ಅನೇಕ ವಿರೋಧಾಭಾಸಗಳಿದ್ದರೂ ಈ ಎರಡು ಅಧ್ಯಾಯಗಳು ಕೃತಿಯ ಬೇರ್ಪಡಿಸಲಾಗದ ಅಂಗ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ.[೨] ರಾಮಾಯಣದಲ್ಲಿ ಕಂಡುಬರುವ ರಾಮನ ಜನ್ಮ, ಅವನ ದೈವೀ ಅಂಶ ಮತ್ತು ರಾವಣನನ್ನು ಕುರಿತಾದ ದಂತಕಥೆಗಳಂಥ ಅನೇಕ ಪೌರಾಣಿಕ ಅಂಶಗಳ ಬಹುಭಾಗ ಈ ಎರಡು ಅಧ್ಯಾಯಗಳಲ್ಲೇ ಕಂಡು ಬರುತ್ತದೆ.