Product Description
ಜಾತಿವ್ಯವಸ್ಥೆಯ ದುಷ್ಟತನಗಳ ಬಗೆಗೆ ಮಾತನಾಡಿದ ಎಷ್ಟೋ ಜನ ಲಿಂಗಸಮಾನತೆ ಬಗೆಗೆ ಮಾತನಾಡಲಿಲ್ಲ. ಈ ದೃಷ್ಟಿಯಿಂದ ಫುಲೆಗಳ ಕೆಲಸ ಇತರ ಸಮಾಜ ಸುಧಾರಕರಿಗಿಂತ ಭಿನ್ನವಾಗಿತ್ತು. ಭಾರತೀಯ ಸಮಾಜವ್ಯವಸ್ಥೆಯ ಮೂಲ ಘಟಕ ಕುಟುಂಬ. ಅದೇ ಮಹಿಳೆಯನ್ನು ಶೋಷಿಸುವ ವ್ಯವಸ್ಥೆಯ ಮೂಲಘಟಕವೂ, ಕಾರಣವೂ ಹೌದೆಂದು ಫುಲೆಗಳು ಅರಿತರು. ಎಂದೇ ಹೆಣ್ಣಿನ ಬಂಡಾಯವನ್ನು ಅದರ ಎಲ್ಲ ನೆಲೆಗಳಲ್ಲಿ ಅರ್ಥಮಾಡಿಕೊಳ್ಳಲು ಶಕ್ತರಾದರು. ಸಮಾಜ ಬದಲಾವಣೆಗಾಗಿ ಅಲ್ಲಿಲ್ಲಿ ದನಿ ಕೇಳುಬರತೊಡಗಿದ್ದ ಕಾಲದಲ್ಲಿ ಅದನ್ನು ತಾತ್ವಿಕ ಪ್ರಶ್ನೆಯಾಗಿಸಿ, ಆಮೂಲಾಗ್ರ ಬದಲಾವಣೆಯನ್ನು ಪ್ರತಿಪಾದಿಸಿ ಹೋರಾಟ ನಡೆಸಿದರು. ಅದರಲ್ಲೂ ಸಾವಿತ್ರಿಬಾಯಿ ಎಂಬ ಸಾಮಾನ್ಯ ಮಹಿಳೆ ಅಸಾಧಾರಣ ದಿಟ್ಟತನ, ಬದ್ಧತೆ, ಕಷ್ಟಸಹಿಷ್ಣುತೆಗಳನ್ನು ಪ್ರದರ್ಶಿಸಿ ಭಾರತೀಯ ಮಹಿಳಾ ವಿಮೋಚನೆಯ ಮೈಲುಗಲ್ಲಾದರು.
ಮಹಿಳಾ ಶಿಕ್ಣಣ ಎನ್ನುವುದು ದೂರದ ಕನಸೇ ಆಗಿದ್ದ ಹೊತ್ತಿನಲ್ಲಿ, ಬಾಲ್ಯವಿವಾಹ ಉತ್ತುಂಗದಲ್ಲಿದ್ದ ಕಾಲದಲ್ಲಿ, ಬಾಲಕಿಯರಿಗಾಗಿ ಶಾಲೆ ತೆರೆದು ಸಮಾನತೆಯತ್ತ ಒಂದು ಹೆಜ್ಜೆಯಿಡುವುದನ್ನು ಸಾವಿತ್ರಿಬಾಯಿ ಕಲಿಸಿದರು. ಶೋಷಿತರ ವಿಮೋಚನೆಯ ದಾರಿಗಳ ಹುಡುಕುತ್ತ ಶಿಕ್ಷಣ-ಸಂಘಟನೆ-ಹೋರಾಟಗಳನ್ನು ಪ್ರತಿಪಾದಿಸಿದರು.