Product Description
ಹಾಸ್ಯ ಪ್ರವೃತ್ತಿಯ ಜೊತೆಗೆ ಕವನ, ಕಿರು-ಕತೆ, ನಗೆಹನಿ, ಚುಟುಕುಗಳು ಮತ್ತು ಆಕರ್ಷಕ ನುಡಿಮುತ್ತುಗಳು ಮುಂತಾದವುಗಳನ್ನು ಬರೆದುಕೊಂಡು, ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುವುದು ನಾನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿರುವ ಹವ್ಯಾಸ.
ಶ್ರೀ ಗಂಗಾವತಿ ಪ್ರಾಣೇಶ ಗುರುಗಳ ಹಾಸ್ಯ ಭಾಷಣದಿಂದ ಸಾಕಷ್ಟು ಪ್ರಭಾವಿತಗೊಂಡ ನಾನು, ಪತ್ರಿಕಾರಂಗದ ದಿಗ್ಗಜರಾದ ಶ್ರೀ ವಿಶ್ವೇಶ್ವರ ಭಟ್ಟರ ಅಂಕಣಗಳ ಅತ್ಯಂತ ಪ್ರೀತಿಯ ಓದುಗನೂ ಹೌದು. ಅವರ ವಿಶ್ವವಾಣಿಯಲ್ಲಿ ಹಾಸ್ಯಗುರು ಪ್ರಾಣೇಶರವರ ‘ಪ್ರಾಣೇಶ್ ಪ್ರಪಂಚ’ ಅಂಕಣಗಳನ್ನು ಓದುತ್ತಾ ಬಂದ ಹಾಗೆ, ಕೇವಲ ಓದಿ ಬಿಡದೇ ಬರೆದಿಟ್ಟುಕೊಳ್ಳುವಂತಹ ಸಾಕಷ್ಟು ಆಕರ್ಷಕ ನುಡಿಸಾಲುಗಳನ್ನು ಅವುಗಳಲ್ಲಿ ಕಂಡುಕೊಂಡೆ. ಸಹಜವಾಗಿ ಅಂಥವುಗಳನ್ನು ಸಂಗ್ರಹಿಸುತ್ತಾ ಬಂದೆ. ಒಂದು ದಿನ ಪ್ರಾಣೇಶ ಗುರುಗಳಿಗೆ ಅವುಗಳನ್ನು ತೋರಿಸಿದಾಗ, ಬಹಳ ಸಂತಸಗೊಂಡ ಅವರು ‘‘ತುಂಬಾನೇ ಚೆನ್ನಾಗಿ ಸಂಗ್ರಹ ಮಾಡಿದ್ದೀರಿ, ಇವುಗಳಿಗೆ ಒಂದು ಪುಸ್ತಕ ರೂಪ ಕೊಡಬಹುದಲ್ಲಾ’’ ಎಂದು ಹೇಳಿದ ಮಾತಿನ ವಿಚಾರದ ಫಲವೇ ಈ ‘ಪ್ರಾಣೇಶ್ ಪಂಚ್ ಪಕ್ವಾನ್ನ’ ಕಿರುಹೊತ್ತಿಗೆ.
ಬೀಚೀ ಪ್ರಾಣೇಶರ ಬರಹಗಳಿಂದಾರಿಸಿದ ಈ ನುಡಿ-ಮುತ್ತುಗಳ ಹೊತ್ತಿಗೆಯಲ್ಲಿ, ವೈಚಾರಿಕತೆಗೆ ಸಾಣೆ ಹಿಡಿಯುವ ತೀಕ್ಷ್ಣ ಮಾತುಗಳಿವೆ, ನಗೆಯ ಹೊನಲನ್ನು ಚಟ್ಟನೇ ಚಿಮ್ಮಿಸುವ ಚಾಟೋಕ್ತಿ, ವ್ಯಂಗ್ಯೋಕ್ತಿಗಳಿವೆ. ಹೊಸ ವಿಚಾರಧಾರೆಯತ್ತ ಕರೆದೊಯ್ಯುವ ನುಡಿದೀಪಗಳಿವೆ. ನೋವಿನನುಭವದಿ ಕರುಳ ಕರಗಿಸುವ, ಮನ ಮೆಚ್ಚಿ ಅಹುದಹುದೆನ್ನುವ ಅನುಭವಾಮೃತ ವಾಣಿಗಳಿವೆ, ಜೀವನದ ಯಾನದಲ್ಲಿ ಹತಾಶೆ, ವಿಷಾಧಗಳನು ಅನುಭವಿಸಿದಾಗ ಅದಕ್ಕೊಂದು ಹೊಸ ನುಡಿಗಟ್ಟನ್ನು ನೀಡುವ ನವಿನೋಕ್ತಿಗಳಿವೆ, ಕಿರು ಮಾತುಗಳಲ್ಲಿ ಪಿರಿದರ್ಥವನು ಹೊಮ್ಮಿಸುವ ನವಿರೋಕ್ತಿಗಳಿವೆ, ಹೊಸನಗೆಯ ಪಂಚ್ಗಳಿವೆ.
ಈಗಾಗಲೇ ಅನೇಕ ಕೃತಿಗಳ ಮೂಲಕ ಕನ್ನಡದ ಪ್ರಮುಖ ಬರಹಗಾರರ ಸಾಲಿನಲ್ಲಿ ಗೌರವದ ಸ್ಥಾನ ಪಡೆದಿರುವ ಬೀಚೀ ಪ್ರಾಣೇಶ ಗುರುಗಳಿಗೆ ಈ ಕೃತಿಯನ್ನು ನುಡಿತೋರಣಗಳ ಮೂಲಕ ಅಭಿಮಾನ ಮತ್ತು ಸಂಪ್ರೀತಿ ತುಂಬಿದ ಗೌರವಗಳೊಂದಿಗೆ ಅರ್ಪಿಸುವ ಆಕಾಂಕ್ಷೆ ನನ್ನದು.