Product Description
ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು, ಬಡವ ಶ್ರೀಮಂತರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ, ಎಲ್ಲ ಭೋಗಭಾಗ್ಯ ಇದ್ದರೂ ಅನುಭಾವಿಸಲಾಗದೇ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕಷ್ಟ ಬಂದಾಗ, ಯಾರಾದರೂ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ನಾನಿದ್ದೇನೆ ಹೆದರಬೇಡ’ ಎಂದು ಹೇಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.ಆತ್ಮೀಯತೆಯಿಂದ, ಸಹಾನುಭೂತಿಯಿಂದ ಕಷ್ಟ ಸುಖವನ್ನು ವಿಚಾರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಜನಸಾಗರದ ನಡುವೆ ಬದುಕುತ್ತಿದ್ದರೂ ನಾವು ಒಬ್ಬೊಬ್ಬರೂ ಒಂಟಿ ದ್ವೀಪ. ಇದರ ಪರಿಣಾಮ, ಒಂಟಿತನ, ತಬ್ಬಲಿತನ, ಅತೃಪ್ತಿ, ನಿಟ್ಟುಸಿರು, ರೋಗರುಜಿನಗಳು, ಅಕಾಲ ಮುಪ್ಪು ಮತ್ತು ಮೃತ್ಯು. ಆಪ್ತಸಲಹೆ ಮತ್ತು ಸಮಾಧಾನ - ಈ ನಿರಾಶೆಯ ಮೋಡಗಳ ಅಂಚಿನ, ಕೋಲ್ಮಿಂಚು, ಅದು ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿ.