Quantity
Product Description
"ಹೇಳವ್ವಾ ಚಾಮುಂಡಾ... ಯಾರು ನೀನು?"-ಇದು ಪ್ರೊ. ನಂಜರಾಜ ಅರಸು ಇದೀಗ ತಾವು ಹೊಸದಾಗಿ ಬರೆದಿರುವ ಈ ಪುಸ್ತಕಕ್ಕೆ ಕೊ(ಇ)ಟ್ಟಿರುವ ಅರ್ಥಗರ್ಭಿತವೂ ಔಚಿತ್ಯಪೂರ್ಣವೂ ಆದ ಹೆಸರು.
ಪ್ರೊ. ಅರಸುಗೆ ಮೈಸೂರು, ಅರಮನೆ, ರಾಜವಂಶ ಮತ್ತು ಚಾಮುಂಡಿಬೆಟ್ಟ ಕುರಿತ ಇತಿಹಾಸ, ಐತಿಹ್ಯ, ನಂಬಿಕೆ ಹಾಗೂ ಕಟ್ಟು ಕಥೆಗಳು ಕರತಲಾಮಲಕ (ಅಂಗೈಮೇಲಣ ನೆಲ್ಲಿಕಾಯಿ). ಅವೆಲ್ಲದರ ನಡುವೆಯೇ ಬೆಳೆದು ಬಂದಿರುವ ಅರಸುಗೆ ರೂಢಮೂಲವಾಗಿ ಬೇರೂರಿರುವ ಈ ಪ್ರಚಲಿತ ಸಂಗತಿಗಳಲ್ಲಿ ದಿಟವೆಷ್ಟು ಸಟೆಯೆಷ್ಟು ಎಂಬ ಪ್ರಶ್ನೆ ಗಾಢವಾಗಿ ಕಾಡಿದೆ. ದೇವಿಯ ಆವಿರ್ಭಾವ ಎಂದು, ಎಲ್ಲಿ, ಎಂತು. ಎಂದು ಅರಸು ಭುವಿ ಬಾನು ಬಿಡದೆ ಸಿಗುವ ಸುಳಿವು ಸೂಚನೆಗಳನ್ನು ಹಿಡಿದು ಬೇರು ಬುಡಸಹಿತ ಅದರ ಮೂಲಚೂಲಗಳನ್ನು ಕೆದಕಿ, ಬೆದಕಿ ಜಾಲಾಡುತ್ತಾರೆ. ಕನ್ನಡನಾಡು ಆರಾಧಿಸುವ ಶ್ರೀಚಾಮುಂಡೇಶ್ವರಿ ದೇವಿಯ ಪರಿಕಲ್ಪನೆಯ ಉಗಮ ವಿಕಾಸಗಳ ನೆಲಬಾನುಗಳನ್ನು ಆತುಕೊಂಡಿರುವ ವಿಶ್ವರೂಪವನ್ನು ತಟಸ್ಥ ಭೂಮಿಕೆಯಲ್ಲಿ ನಿಂತು ಸಿಂಹಾವಲೋಕನ ಮಾಡಿರುವ ಬಹು ವ್ಯಾಪಕತೆಯ ಅಮೂಲ್ಯ ಗ್ರಂಥವಿದು.
ಇದು ಬಹು ಆಯಾಮದ ಮೌಲಿಕ ಪುಸ್ತಕ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಮತ್ತು ಜಾನಪದೀಯ ಕ್ಷೇತ್ರದ ಸಂಶೋಧಕರಿಗೆ ಉಪಯುಕ್ತ ಮಾಹಿತಿಗಳು ಇಲ್ಲಿ ಸೂರೆಹೋಗಿವೆ. ಭಾಷೆಯ ಅಧ್ಯಯನಕ್ಕೂ ಇಲ್ಲಿ ಸಾಮಗ್ರಿಯಿದೆ. ಇಲ್ಲಿ ಪುರಾಣವಲ್ಲದೆ ಇತಿಹಾಸವೂ ಇದೆ. ಆದರೆ ಚರಿತ್ರೆ ಸಾಹಿತ್ಯದ ಕವಚ ತೊಟ್ಟಿದೆ. ಚಾಮುಂಡಿಯ ವಿಗ್ರಹವು ಇದಿರಬಹುದೆ, ದೇವಿಯ ಪರಿಕಲ್ಪನೆ ಇಲ್ಲಿಂದ ಬಂದಿರಬಹುದೆ ಎಂಬೊಂದು ಪ್ರಮೇಯ ಅಥವಾ ಊಹೆಯಿಂದ ನಾನಾ ಮೂಲಗಳನ್ನು ಶೋಧಿಸುತ್ತಾರೆ. ಅವರು ಪರಾಮರ್ಶಿಸುವ ಒಂದೊಂದು ಪ್ರಮೇಯವೂ ಅನುಸರಿಸುವ ನೇತಿಮಾರ್ಗವೂ ಕುತೂಹಲವನ್ನು ಕೆರಳಿಸುತ್ತವೆ. ವೈವಿಧ್ಯಮಯವೂ ಹೃದಯಸ್ಪರ್ಶಿಯೂ ಆದ ನಿರೂಪಣೆಯ ವಿಧಾನ ಮತ್ತು ತಂತ್ರ ಆಸಕ್ತಿಯನ್ನು ಅರಳಿಸುತ್ತವೆ. ಓದುಗರನ್ನೂ ಭಿನ್ನಾಭಿಪ್ರಾಯ ಇರುವವರನ್ನೂ ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ಮಾತುಕಥೆಯಲ್ಲಿ ತೊಡಗುತ್ತಾರೆ. ತನ್ನ ವಿಚಾರಗಳನ್ನು ದಿನನಿತ್ಯದ ಜನರೂಢಿಯ ಆಡುಮಾತಿನಲ್ಲಿ ಲವಲವಿಕೆಯಿಂದ ಹಂಚಿಕೊಳ್ಳುವ ಧಾಟಿ ಮಜಬೂತಾಗಿದೆ. ಅವರು ಸಂದರ್ಶಿಸುವ ವ್ಯಕ್ತಿಗಳೊಂದಿಗೆ ಸಂಭಾಷಿಸುವ, ಓದುಗರ ಪರವಾಗಿ ಪ್ರಶ್ನೆಗಳನ್ನು ಕೇಳುವ ರೀತಿ ಪ್ರಾಚೀನ ಅರ್ವಾಚೀನಗಳು ಕೈಕೈ ಹಿಡಿದು ವರ್ತಮಾನದಲ್ಲಿ ಹೆಜ್ಜೆ ಹಾಕುತ್ತಿರುವಂತೆ ಚೇತೋಹಾರಿಯಾಗಿದೆ. ಅದರಲ್ಲಿ ವಿಡಂಬನೆ. ತುಸು ಹಾಸ್ಯ, ವಿನೋದ, ಲೀಲಾಜಾಲವಾಗಿ ಇಂಗ್ಲಿಷು-ಉರ್ದು ಪದಗಳ ಬಳಕೆ, ಮಡಿ-ಮುಲಾಜು-ಬಿಗುಮಾನಗಳಿಲ್ಲದ ಮಾತುಗಾರಿಕೆ, ಸಹಜವಾದ ಶೈಲಿ- ಇವು ಓದುಗರಿಗೆ ಕಚಗುಳಿ ಇಡುತ್ತವೆ.
Binding
Hard Bound
Author
Prof P V Nanjaraja Arasu
Number of Pages
372
Publisher
Abhiruchi Prakashana
Publication Year
2025
Length
22 CMS
Weight
600 GMS
Width
15 CMS
Language
Kannada