Product Description
‘ಒಂದು ಜೀವನ ಸಾಲದು!’ ಪ್ರತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಕಥೆ. ಇಲ್ಲಿರುವುದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆ. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ದೇಶದ ಆಗುಹೋಗುಗಳ ತಪ್ತ ಕಥನ. ಚರಿತ್ರೆಯ ಘಟನೆಗಳೇ ಅವರ ಭಾವಕೋಶ, ಆದ್ದರಿಂದ ಇದು ಸಮಕಾಲೀನ ಚರಿತ್ರಕೋಶ. ಈ ಪುಸ್ತಕ ಮುಂದಿಡುವ ಅಪಾರ ವಿವರಗಳನ್ನು ಅರಗಿಸಿಕೊಳ್ಳಲು ಒಂದು ಓದು ಸಾಲದು!. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್ನಲ್ಲಿ ಭಾರತದ ಹೈಕಮಿಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.