Product Description
ಕಳೆದ ಅರ್ಧ ಶತಮಾನದಲ್ಲಿ ಅನೇಕ ನೊಬೆಲ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ 'ಕಣವಿಜ್ಞಾನ'(ಪಾರ್ಟಿಕಲ್ ಫಿಸಿಕ್ಸ್) ವನ್ನು ಒಂದು ಮೂಲಭೂತ ಅಧ್ಯಯನ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಅಮೆರಿಕದ ಲೆಡೆರ್ಮನ್ರವರ 'ದೇವಕಣ' ಎಂಬ ಪದ ಈ ಕ್ಷೇತ್ರದಲ್ಲಿ ಕುತೂಹಲವನ್ನು ಹಬ್ಬಿಸಿದೆ. ಆದರೂ ನಮ್ಮ ಜೀವಕ್ಕೆ, ನಮ್ಮ ವಿಶ್ವಕ್ಕೆ ಈ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಪ್ರತಿ ಕಣವೂ ಅತಿ ಅಗತ್ಯ. ಯಾವ ಒಂದು ಕಣವೂ ಹೆಚ್ಚಿಲ್ಲ, ಕಡಿಮೆಯಿಲ್ಲ! ಕೃತಿಯಲ್ಲಿ ಎಲ್ಲರಿಗೂ ಪ್ರಾಯಶಃ ತಿಳಿದಿರುವ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಕಣಗಳಲ್ಲದೆ ಮೇಸಾನ್, ಕ್ವಾರ್ಕ್, ನ್ಯೂಟ್ರಿನೊ ಇತ್ಯಾದಿ ನವ್ಯ ಕಣಗಳನ್ನೂ ಪರಿಚಯ ಮಾಡಿಕೊಡಲಾಗಿದೆ; ಇತ್ತೀಚೆಗೆ ನಡೆದ ಹಿಗ್ಸ್ ಬೋಸಾನ್ನ ಆವಿಷ್ಕಾರವನ್ನು ವಿವರಿಸಲಾಗಿದೆ. ಅಲ್ಲದೆ, ಕಣಜಗತ್ತಿನ ವೈವಿಧ್ಯದ ಜೊತೆಗೆ ವಿಜ್ಞಾನದ ಸರಳೀಕರಣದ ವಿಧಾನದ ಆಸ್ವಾದವೂ ಸಿಗಬಹುದು. ಜೊತೆಗೆ, ಈ ಕ್ಷೇತ್ರದ ಖ್ಯಾತ ವಿಜ್ಞಾನಿಗಳ ಕಿರು ಪರಿಚಯವನ್ನೂ ಕೊಡಲಾಗಿದೆ. ಈ ಕೃತಿಯನ್ನು ರಚಿಸಿರುವ ಪಾಲಹಳ್ಳಿ ವಿಶ್ವನಾಥ್ರವರು ಮುಂಬಯಿಯ ಟಿ.ಐ.ಎಫ್.ಆರ್. ಮತ್ತು ಬೆಂಗಳೂರಿನ ಐ.ಐ.ಎ. ಸಂಸ್ಥೆಗಳಲ್ಲಿ ಸಂಶೋಧನೆ ಕಾರ್ಯಗಳನ್ನು ನಡೆಸಿದ್ದು ಹಲವಾರು ವಿಶ್ವಕಿರಣ, ಕಣವಿಜ್ಞಾನ ಮತ್ತು ಖಭೌತ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದಾರೆ. ಈ ಪ್ರಯೋಗಗಳು ಅವರನ್ನು ಕರ್ನಾಟಕದ ಆಳವಾದ ಗಣಿಗಳಿಂದ ಅಮೆರಿಕದ ಮತ್ತು ಭಾರತದ ಉನ್ನತ ಪರ್ವತ ಶ್ರೇಣಿಗಳಿಗಲ್ಲದೆ ಕಣವಿಜ್ಞಾನದ ಕಾಶಿಯಾಗಿದ್ದ ಫರ್ಮಿಲ್ಯಾಬಿಗೂ ಕರೆದುಕೊಂಡು ಹೋಗಿವೆ. ಮೂಲಭೂತ ವಿಜ್ಞಾನದ ಸ್ವಾರಸ್ಯವನ್ನು ಕನ್ನಡದಲ್ಲಿ ತಿಳಿಸುವ ಪ್ರಯತ್ನವನ್ನು ಅವರು ಪುಸ್ತಕಗಳ ಮತ್ತು ಲೇಖನಗಳ ಮೂಲಕ ಮಾಡುತ್ತಿದ್ದಾರೆ.