Product Description
ಇಪ್ಪತ್ತನೆಯ ಶತಮಾನದಲ್ಲಿ ಯೂರೋಪ್ ಕಂಡ ತತ್ತ್ವಶಾಸ್ತ್ರ ಪ್ರತಿಪಾದಕರಲ್ಲಿ ರಸೆಲ್, ವಿಡ್ಗೆನ್ಸ್ಟೈನ್, ಸಾರ್ತ್ರ್, ರೈಲ್, ಏಯರ್, ಮೊದಲಾದವರು ಪ್ರಮುಖರು ಮತ್ತು ಬೇರೆಬೇರೆ ಪಂಥಗಳ ಪ್ರವರ್ತಕರು. ಪ್ರಾಯೋಗಿಕ ಜೀವನವನ್ನು ಸಾರಾಸಗಟಾಗಿ ನಿರಾಕರಿಸದೆಯೂ ಇವರಲ್ಲಿ ಕೆಲವರು ಪ್ರಪಂಚದ ಅಸ್ತಿತ್ವವನ್ನು ಕುರಿತಂತೆ ಸಂಶಯ ವ್ಯಕ್ತಪಡಿಸಿದವರು. ಎಷ್ಟೋ ವೇಳೆ ಅವರು ಭಾಷೆಯ ಪ್ರಯೋಗ ಮತ್ತು ವಿಶ್ಲೇಷಣೆಗಳನ್ನಾಧರಿಸಿ ವಿಶ್ವದ ಸಂಗತಿ ಮತ್ತು ಸತ್ಯತೆಗಳ ಬಗ್ಗೆ ದಾರ್ಶನಿಕ ಸಿದ್ಧಾಂತಗಳನ್ನು ರೂಪಿಸಿಬಿಡುತ್ತಾರೆ. ಶತಮಾನದ ಅತ್ಯಂತ ಪ್ರಭಾವಿ ತತ್ತ್ವಶಾಸ್ತ್ರ ಪ್ರಣಾಲಿಕೆಯೆಂದರೆ ಸಾರ್ತ್ರ್ ಪ್ರಣೀತ ಅಸ್ತಿತ್ವವಾದ. ಬೇರಾವುದೇ ಪಂಥಕ್ಕಿಂತಲೂ ಹೆಚ್ಚಿನ ವ್ಯಾಪಕತೆ ಈ ತತ್ತ್ವಶಾಸ್ತ್ರಕ್ಕಿದೆ. ಎಲ್ಲ ಸಿದ್ಧಾಂತಗಳನ್ನು ಸೂಕ್ಷ್ಮವಾಗಿ ಪರಿಚಯಿಸಿ ಪರಾಮರ್ಶಿಸುವ ಉಪಯುಕ್ತ ಪ್ರತಿಪಾದನೆ ಈ ಗ್ರಂಥದಲ್ಲಿದೆ. ಕನ್ನಡದಲ್ಲಿ ಇಂತಹ ಗ್ರಂಥಗಳು ಅತಿವಿರಳ.
ಇದರ ಲೇಖಕಿ ಡಾ. ಸುಮನ್ ಗುಪ್ತ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಎ.ಜೆ. ಏಯರ್ನ ನಿರ್ದೇಶನದಲ್ಲಿ ಪಿಎಚ್.ಡಿ. ಪದವಿ ಪಡೆದ ಪ್ರಾಧ್ಯಾಪಕಿ. ದೆಹಲಿ ಮತ್ತು ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕಿಯಾಗಿದ್ದು ಹತ್ತಾರು ವಿದ್ವತ್ಪೂರ್ಣ ಗ್ರಂಥಗಳನ್ನು ಮತ್ತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಅನುವಾದಕಿ ಡಾ. ಆರ್. ಪೂರ್ಣಿಮಾ ಕರ್ನಾಟಕದ ಪ್ರಖ್ಯಾತ ಪತ್ರಕರ್ತೆ, ಸಂಪಾದಕಿ ಮತ್ತು ಬರಹಗಾರ್ತಿ. ಅವರು ಪಡೆದಿರುವ ಪ್ರಶಸ್ತಿಗಳು ಬಹಳ ಉನ್ನತ ಮಟ್ಟದವು. ನವಕರ್ನಾಟಕ ಸಂಸ್ಥೆ ಪ್ರಕಟಿಸಿರುವ ಕುಲದೀಪ್ ನಯ್ಯರ್ ಅವರ ಆತ್ಮಕತೆ ಒಂದು ಜೀವನ ಸಾಲದು ಕೃತಿಯನ್ನು ಅನುವಾದಿಸಿರುವವರು ಡಾ. ಪೂರ್ಣಿಮಾ.
ಪ್ರಸ್ತುತ ಇಪ್ಪತ್ತನೇ ಶತಮಾನದ ತತ್ತ್ವಶಾಸ್ತ್ರ ಸಂಪುಟದ ಐದನೆಯ ಅಧ್ಯಾಯವನ್ನು ಡಾ. ಜಿ. ರಾಮಕೃಷ್ಣ ಅನುವಾದಿಸಿದ್ದಾರೆ.