Product Description
ಬೆಂಗಳೂರು ನಗರವನ್ನು ಕಟ್ಟಿದ ಮೊದಲನೆಯ ಕೆಂಪೇಗೌಡ ಸುಮಾರು 46 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದ ಪ್ರಬುದ್ಧ, ವಿದ್ಯಾವಂತ, ರಾಜಕೀಯ ಚಾಣಾಕ್ಷ, ದೈವಭೀರು ಹಾಗೂ ಪ್ರಜಾವತ್ಸಲ ವಿಜಯನಗರ ಸಾಮಂತ ರಾಜ. ವಿಜಯನಗರದ ಅರಸು ಅಚ್ಯುತರಾಯನಿಂದ ಆರ್ಥಿಕ ಸಹಾಯವನ್ನು ಪಡೆದು, ಎಲ್ಲ ವೃತ್ತಿಪರರಿಗೆ ಅವರದ್ದೇ ಆದ ಪೇಟೆಗಳನ್ನು ಹಾಗೂ ನಗರದ ಸುತ್ತಲೂ ಮಣ್ಣಿನ ಕೋಟೆಯನ್ನು ಕಟ್ಟಿಸಿದನು. ಕೆರೆ ಕಟ್ಟೆಗಳನ್ನು ಕಟ್ಟಿ ಉತ್ತಮ ನೀರಾವರಿ ವ್ಯವಸ್ಥೆಯನ್ನು ರೂಪಿಸಿದನು. ದೊಡ್ಡ ಬಸವಣ್ಣ. ದೊಡ್ಡ ಗಣೇಶ, ಹನುಮಂತ, ಮಲ್ಲಿಕಾರ್ಜುನ ದೇವಾಲಯಗಳನ್ನು ಕಟ್ಟಿಸುವುದರ ಜೊತೆಗೆ ಕೋಟೆ ಗೋಪುರವನ್ನು ಕಾಯುವ ಗುಜ್ಜಲಿ ಓಬನಾಯಕನ ಬಯಕೆಯಂತೆ ಬೇಡರ ಕಣ್ಣಪ್ಪ ಆಲಯವನ್ನೂ ಕಟ್ಟಿಸಿದನು. ಸುವ್ಯವಸ್ಥಿತ ಆಡಳಿತಕ್ಕೆ ಯಲಹಂಕ ನಾಡನ್ನು ಕ್ರಮಬದ್ಧವಾಗಿ ಹಳ್ಳಿ, ಸ್ಥಳ, ಸೀಮೆ, ನಾಡು ಎಂದು ವಿಂಗಡಿಸಿದನು. ಹೊರರಾಜ್ಯದಿಂದ ವ್ಯಾಪಾರ ಮಾಡುವವರಿಗೆ ವಿಶೇಷವಾದ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟನು. ಸಾಲುಮರಗಳನ್ನು ಬೆಳೆಸಿ ಹೊರೆಗಲ್ಲುಗಳನ್ನು ನೆಡಿಸಿದನು. ಸಂಗ್ರಹಿಸಿದ ಸುಂಕವನ್ನು ಶಿವಗಂಗೆಯ ಖಜಾನೆಯಲ್ಲಿಡುತ್ತಿದ್ದನು.