Product Description
19ನೆಯ ಶತಮಾನದ ಕೇರಳ ಸಮಾಜವು ಜಾತಿ ವ್ಯವಸ್ಥೆಯನ್ನು ಭದ್ರವಾಗಿ ಪಾಲಿಸಿ ಪೋಷಿಸುತ್ತಿದ್ದ ಸಮಯದಲ್ಲಿ ಅದಕ್ಕೆ ಸವಾಲು ಹಾಕಿ, ಕೆಳವರ್ಗದ ಜನರನ್ನು ಜಾಗೃತಿಗೊಳಿಸಿದವರಲ್ಲಿ ಶ್ರೀ ನಾರಾಯಣ ಗುರುಗಳು ಅಗ್ರಗಣ್ಯರು. ಅಸ್ಪೃಶ್ಯರು ಸಮಾಜದಲ್ಲಿ ಎಲ್ಲರೊಡನೆ ಸರಿಸಮಾನವಾಗಿ ಬದುಕಬೇಕಾದರೆ ಮೊದಲು ವಿದ್ಯಾವಂತರಾಗಬೇಕು ಎಂದು ಸಾರಿದರು. ಜೊತೆಯಲ್ಲಿಯೇ ಅಸ್ಪೃಶ್ಯರ ಪ್ರಗತಿಗೆ ಅಡ್ಡಿಯಾಗಿದ್ದ ಹಲವು ಮೂಢನಂಬಿಕೆಗಳನ್ನು ಮೆಟ್ಟಿ ನಿಲ್ಲಬೇಕಾದ ಅಗತ್ಯವನ್ನು ಎತ್ತಿ ಹೇಳಿದರು. ಮಾಟ, ಮಂತ್ರ, ಪ್ರಾಣಿ ಬಲಿ, ನಾಗಪೂಜೆ ಮುಂತಾದವನ್ನು ನಿಷೇಧಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಎತ್ತಿ ಹಿಡಿದರು. ಸರಳ ವಿವಾಹವನ್ನು ಪ್ರೋತ್ಸಾಹಿಸಿದರು. ಮುಖ್ಯವಾಗಿ ಅಸ್ಪೃಶ್ಯರನ್ನು ಕಾಡುತ್ತಿರುವ ಪ್ರಮುಖ ಶಾಪವಾದ ಮದ್ಯಪಾನವನ್ನು ನಿಷೇಧಿಸಿದರು. ನಾರಾಯಣ ಗುರುಗಳು ಹೆಚ್ಚು ಗದ್ದಲವಿಲ್ಲದೆ ಭಾರತದ ನೈಋತ್ಯ ಮೂಲೆಯಲ್ಲಿ ನಡೆಸಿದ ಈ ಕ್ರಾಂತಿ, ಕ್ರಮೇಣ ರವೀಂದ್ರನಾಥ ಠಾಕೂರ್, ಗಾಂಧೀಜಿ, ವಿನೋಬಾ ಭಾವೆ ಮುಂತಾದವರ ಗಮನವನ್ನು ಸೆಳೆಯಿತು. ಅವರೆಲ್ಲರೂ ಮುಕ್ತ ಕಂಠದಿಂದ ನಾರಾಯಣ ಗುರುಗಳ ಪ್ರಯತ್ನವನ್ನು ಶ್ಲಾಘಿಸಿದರು ಹಾಗೂ ಪ್ರೋತ್ಸಾಹಿಸಿದರು.
ನಾರಾಯಣ ಗುರುಗಳು ಸನ್ಯಾಸಿಗಳಂತೆ ಕಾವಿ ಬಟ್ಟೆಯನ್ನು ತೊಡದೆ ಬಿಳಿಯ ಧೋತಿಯನ್ನು ತೊಟ್ಟು ಯಾವ ಸನ್ಯಾಸಿಗೂ ಕಡಿಮೆಯಿಲ್ಲದಂತೆ ಬಾಳಿದರು. ‘ಮನುಷ್ಯನ ಧರ್ಮ ಯಾವುದೇ ಆಗಿರಲಿ, ಅವನು ಒಳ್ಳೆಯ ಮನುಷ್ಯನಾಗಬೇಕಾದದ್ದು ಮುಖ್ಯ’ ಎಂದು ಸಾರಿದರು. ಈ ಹಿನ್ನೆಲೆಯಲ್ಲಿ ನಾರಾಯಣ ಗುರುಗಳು ವಿಶ್ವಮಾನ್ಯರು. ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿಯನ್ನು ಡಾ|| ಪಾರ್ವತಿ ಜಿ. ಐತಾಳ್ ಅವರು ಸೊಗಸಾಗಿ ಸಂಗ್ರಹಿಸಿದ್ದಾರೆ.