Product Description
ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು ಅವಳ ಹಿಂದಿನ-ಇಂದಿನ ಸ್ಥಾನಮಾನಗಳತ್ತ ವಿಶ್ಲೇಷಣಾತ್ಮಕ ನೋಟ ಬೀರಿ ವಾಸ್ತವದತ್ತ ಮುಖ ಮಾಡಿದ ಲೇಖನಗಳು. ಅವಳ ಸುತ್ತ ಮೌಢ್ಯದ ಕೋಟೆ ಕಟ್ಟಿ, ನಿಬಂಧನೆಗಳನ್ನು ಹೇರಿ ಅಂದಿನ ಪುರುಷ ಪ್ರಾಧಾನ್ಯ ಸಮಾಜ ಆಕೆಯನ್ನು ಹೈರಾಣಗೊಳಿಸಿತ್ತು. ಸಂಪ್ರದಾಯದ ನೆಪದಲ್ಲಿ ಇಂದಿಗೂ ಅವಳು ಈ ಕೋಟೆಯಿಂದ ಹೊರಬಂದಿಲ್ಲವೆಂದು ಇಲ್ಲಿನ ಲೇಖನಗಳು ಹೇಳುತ್ತಿವೆ. ಎಷ್ಟೇ ಆಧುನಿಕ ಸಮಾಜದಲ್ಲಿ ಜೀವಿಸುತ್ತಿದ್ದರೂ ಹಲವು ಕುಟುಂಬಗಳಲ್ಲಿ ಮೇಲ್ವರ್ಗ-ಕೆಳವರ್ಗಗಳೆಂಬ ತಾರತಮ್ಯವಿಲ್ಲದೆ ಅವಳು ವಿಧವಿಧವಾದ ಕಟ್ಟುಪಾಡುಗಳಿಗೆ ಗುರಿಯಾಗಿದ್ದಾಳೆ. ನೆರೆಯ ರಾಜ್ಯವಿರಬಹುದು ದೂರ ರಾಷ್ಟ್ರವಿರಬಹುದು - ಆಯಾ ಪ್ರದೇಶದ ಕ್ರೂರ - ಮೂಢನಂಬಿಕೆಗಳಿಗೆ ಅವಳು ಬಲಿಯಾಗಿದ್ದಾಳೆ. ಹೆಣ್ಣನ್ನು ಒಂದು ಆಸ್ತಿ ಎಂದು ಪರಿಗಣಿಸಿ ಇನ್ನಿತರ ವಸ್ತುಗಳ ಮೇಲಿನ ಒಡೆತನದಂತೆ ಆಕೆಯ ಮೇಲೆ ಗಂಡಿನ ಅಧಿಕಾರವಿತ್ತೆಂದೂ ಅವಳಿಗೆ ಸ್ವತಂತ್ರವಾಗಿ ಯೋಚಿಸುವ ಹಕ್ಕು ಕೂಡ ಇಲ್ಲಿಲ್ಲ ಎಂಬ ಅಂಶವನ್ನು ಇಲ್ಲಿ ಹಲವು ಸಾಹಿತ್ಯಗಳ ಓದಿನಿಂದ ಶ್ರುತಪಡಿಸಲಾಗಿದೆ. ಇಂದು ಇಂಥ ವ್ಯವಸ್ಥೆಯಿಂದ ಹೊರಬರುವ ಸಾಧ್ಯತೆಗಳು ಸಾಕಷ್ಟಿದ್ದು ನಿಧಾನವಾಗಿ ಅದರತ್ತ ಮುಖಮಾಡಿದ ಕ್ರಾಂತಿಕಾರಿ ಬದಲಾವಣೆಯ ಬಗ್ಗೆಯೂ ಇಲ್ಲಿ ಸ್ತ್ರೀ ದನಿ ಎತ್ತಿದ್ದಾಳೆ.