Quantity
Product Description
ಕವಿ, ಲೇಖಕಿ ಎಂ.ಆರ್.ಭಗವವತಿ ಅವರು ನಿರೂಪಣೆ ಹಾಗೂ ಸಂಯೋಜನೆ ಮಾಡಿರುವ ಕೃತಿ ಸೋಜಿಗದ ಬಳ್ಳಿ. ಈ ಕೃತಿಯು ಶ್ರೀಮತಿ ಸರಸ್ವತಿ ಶ್ರೀನಿವಾಸ ರಾಜು ಅವರ ಆತ್ಮಕಥನವಾಗಿದೆ. ಈ ಕೃತಿಯಲ್ಲಿ ಜಿ.ಪಿ.ಬಸವರಾಜು ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ ಬರವಣಿಗೆ.
ಆತ್ಮಕತೆ ಎನ್ನುವುದು ಬರೆಯುವ ವ್ಯಕ್ತಿಯ ಪ್ರಾಮಾಣಿಕತೆಯ ಮೇಲೆ ನಿಂತಿರುತ್ತದೆ. ಈ ಪ್ರಾಮಾಣಿಕತೆಯೇ ಈ ಕೃತಿಯ ಜೀವಾಳವಾಗಿದೆ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ, ಶ್ರೀನಿವಾಸ ರಾಜು ಸಮುದಾಯದಿಂದ ಮೂಡಿಬಂದ ವ್ಯಕ್ತಿ; ಕೌಟುಂಬಿಕ ಭಿತ್ತಿ ಎನ್ನುವುದು ಇಲ್ಲಿ ತೆಳು ಪರದೆ. ನಿಜವಾದ ಭಿತ್ತಿ ಸಮುದಾಯವೇ. ಈ ರಾಜು ಅವರನ್ನು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ, ಸತ್ಯಕ್ಕೆ ಅಪಚಾರವಾಗದ ರೀತಿಯಲ್ಲಿ ಮೂಡಿಸಿರುವ ರೀತಿ ಮೆಚ್ಚುವಂತಿದೆ. ರಾಜು ಅವರ ಚಿತ್ರದಂತೆಯೇ ಇಲ್ಲಿ ಸರಸ್ವತಿ ಅವರ ಚಿತ್ರವೂ ಮೂಡುತ್ತ ಹೋಗಿರುವುದು ವಿಶೇಷ. ರಾಜು ’ಎತ್ತರದ’ ವ್ಯಕ್ತಿ ಸರಸ್ವತಿ ’ಕುಳ್ಳು.’ ಆದರೆ ಈ ಕೃತಿಯ ಆರಂಭದಿಂದ ಬೆಳೆಯುತ್ತಲೇ ಹೋಗಿ ರಾಜು ಅವರನ್ನು ಮುಟ್ಟಿಬಿಡುವ, ಅವರ ಎತ್ತರಕ್ಕೆ ಸಮಸಮವಾಗಿ ಬೆಳೆದು ನಿಂತುಬಿಡುವ ಸರಸ್ವತಿ ಅವರ ಚಿತ್ರಣವೂ ಕೃತಿಯಲ್ಲಿ ಗಾಢವಾಗಿ ಚಿತ್ರಿತವಾಗಿದೆ. ಒಬ್ಬ ಗೃಹಿಣಿಯಾಗಿ, ಸೊಸೆಯಾಗಿ, ಮಗಳಾಗಿ, ತಾಯಿಯಾಗಿ, ದೊಡ್ಡ ಕುಟುಂಬದ ಮುಖ್ಯ ಕೊಂಡಿಯಾಗಿ, ಜೀವಂತ ಬದುಕಿನ ಬಹುದೊಡ್ಡ ಪ್ರತಿಮೆಯಾಗಿ ಕಾಣಿಸುವ ಸರಸ್ವತಿ, ರಾಜು ಅವರಷ್ಟೇ ಮುಖ್ಯರು.ಒಬ್ಬರದು ಅಚ್ಚುಕಟ್ಟು ಕುಟುಂಬ; ಇನ್ನೊಬ್ಬರದು ಅಷ್ಟೇ ಅಚ್ಚುಕಟ್ಟಾದ ಸಮೂಹ. ಒಂದು ವ್ಯಷ್ಟಿಪ್ರಜ್ಞೆಯಾದರೆ ಇನ್ನೊಂದು ಸಮಷ್ಠಿಪ್ರಜ್ಞೆ. ಎರಡೂ ಸರಿಯಾದ ಹದದಲ್ಲಿ ಬೆರೆತಾಗಲೇ ಸಮರಸ ಜೀವನ. ಈ ಕೃತಿಯನ್ನು ಓದಿದಾಗ ಈ ಸಮರಸ ಜೀವನ ಬಹುದೊಡ್ಡ ಚಿತ್ರವಾಗಿ ಮನದ ಮುಂದೆ ಬಿಚ್ಚಿಕೊಳ್ಳುತ್ತದೆ. ಆತ್ಮಕಥೆಯ ಸಾರ್ಥಕತೆ ಇರುವುದೇ ಇಂಥ ಕೃತಿಗಳಲ್ಲಿ. ಬದುಕಿನ ಎಲ್ಲ ಸಂಕೀರ್ಣತೆಯನ್ನು ಈ ಆತ್ಮಕತೆ ತನ್ನ ಸರಳತೆಯಲ್ಲಿಯೇ ಹಿಡಿಯಲು ನೋಡಿದೆ. ನಿರೂಪಣೆಯ ಸವಾಲು ಇರುವುದೇ ಇಲ್ಲಿ. ಈ ಸರಳತೆಗೆ ಎಲ್ಲಿಯೂ ಧಕ್ಕೆ ತಾರದಂತೆ ಹಗುರವಾದ ಶೈಲಿಯಲ್ಲಿ, ಗಾಂಭೀರ್ಯ ಮುಕ್ಕಾಗದಂತೆ ನಿರೂಪಿಸಿರುವ ಎಂ. ಆರ್. ಭಗವತಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂಬುದಾಗಿ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
Author
M R Bhagavathi
Binding
Soft Bound
Number of Pages
220
Publication Year
2021
Publisher
Odanadi Balaga, Doddaballapura
Height
2 CMS
Length
22 CMS
Weight
500 GMS
Width
14 CMS
Language
Kannada