Product Description
ಇದೊಂದು ಆತ್ಮಕಥಾರೂಪೀ ಕಾದಂಬರಿ. ಅಂತಿಂತಹ ಕಾದಂಬರಿಯಲ್ಲ. ತನ್ನ ಅಪೂರ್ವ ತಂತ್ರ, ಅಪರೂಪದ ಸೃಜನಶೀಲತೆ, ಅನಾದೃಶ ನಿರೂಪಣ ಶೈಲಿಗಳಿಂದಾಗಿ ಕನ್ನಡಕ್ಕಷ್ಟೆ ಅಲ್ಲ, ಭಾಷಾಂತರಿಸಿದರೆ ಭಾರತಕ್ಕೇ ಒಂದು ಭೂಷಣ ಎನ್ನುವಂತಹ ಮಹಾಭಾರತ ಕಥೆಯನ್ನಾಧರಿಸಿದ ಆತ್ಮಕಥೆ.
ದುರ್ದೈವೀಜೀವಿ ಕುನ್ತಿ ಹೇಳುವ ಈ ಆತ್ಮಕಥೆಯಲ್ಲಿ ಆಕೆಯ ತಪ್ಪೊಪ್ಪಿಗೆಗಳಿವೆ(Confessions), ನ್ಯಾಯಾನ್ಯಾಯ ನಿಕಷಣವಿದೆ, ಸುಖಾಂತ-ದುರಂತಗಳ ದೃಷ್ಟಾಂತಗಳಿವೆ, ಉರಿ-ಸಿರಿ, ನಗೆ-ಕಂಬನಿ, ವಂಚನೆ-ವಿವಂಚನೆ, ಕಾಠಿಣ್ಯ-ಮಾರ್ದವತೆ, ಸರಳತೆ-ವಕ್ರತೆ, ನಿಯೋಗ-ವಿಯೋಗ, ಹೀಗೆ ಅನೇಕ ದ್ವಂದ್ವಗಳ ದ್ವಂದ್ವ ನಡೆಯುತ್ತದೆ, ಕುನ್ತಿಯ ಕಣ್ಣಲ್ಲಿ!
ಭಾರತೀಯ ಕಾದಂಬರೀ ಪ್ರಪಂಚದಲ್ಲಿ ನಮ್ಮ ಆಚಾರ್ಯರದೇ ಒಂದು ವಿಶಿಷ್ಟ ಕ್ಷೇತ್ರ - ಅದುವೇ ಪೌರಾಣಿಕ. ‘ಚಾಣಕ್ಯ’ನಂತಹ ಐತಿಹಾಸಿಕ ಕಥಾವಸ್ತುವಿನಲ್ಲೂ ಪೌರಾಣಿಕತೆಯ ಸೊಗಡು. ಇದೆ ಆಚಾರ್ಯರ ವೈಯಕ್ತಿಕತೆ. ‘ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರಿಧಿ’ ಎನಿಸಿದ ಇವರು ಮಹಾಭಾರತವನ್ನಾಧರಿಸಿ ಬರೆದ ಕಾದಂಬರಿಗಳೆಲ್ಲವೂ ಆಚಾರ್ಯರ ಸ್ವಂತಿಕೆ, ವಿಶಿಷ್ಟ ದೃಷ್ಟಿಕೋನಗಳಿಗೆ ಸಾಕ್ಷಿ ನುಡಿಯುವಂತಿವೆ.