Product Description
ಈ ಕೃತಿಯನ್ನು ಸಂಗೀತ ಬಲ್ಲವರು ಮಾತ್ರ ಓದಬೇಕೆಂಬ ತಪ್ಪು ಕಲ್ಪನೆ ಮೂಡಬಹುದು. ಸಂಗೀತದ ಪರಿಭಾಷೆಗಳ ಬಗ್ಗೆ, ರಾಗ, ತಾನ, ಪಲ್ಲವಿ, ನೆರವಲ್, ಸ್ವರ, ಕಲ್ಪನಾ ಸ್ವರ ಇತ್ಯಾದಿ ಕೆಲವು ತಾಂತ್ರಿಕ ಸಂಗತಿಗಳ ಬಗ್ಗೆ ಈ ಕೃತಿ ಅಲ್ಲಲ್ಲಿ ಮಾತನಾಡುವುದು ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ ಸಂಗೀತ ಲೋಕದಲ್ಲಿ ವೆಂಕಟೇಶ್ ಅವರು ನಡೆಸಿದ ಸೆಣಸಾಟವೇ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಗಂಡ, ಹೆಂಡತಿ, ಪುಟ್ಟ ಮಗು ಗಣೇಶ - ಈ ಮೂವರ ಸಂಸಾರ, ಸಂಗೀತವನ್ನು ಪ್ರೀತಿಸಿ, ಅದನ್ನೇ ನೆಚ್ಚಿಕೊಂಡು, ಸೀಮಿತ ಆರ್ಥಿಕ ವರಮಾನದಲ್ಲಿ ನಡೆಸುವ ಹೋರಾಟ ಸಣ್ಣದಾಗಿ ಕಾಣುವುದಿಲ್ಲ. ಸರಳ ಭಾಷೆ, ಹಗುರ ಶೈಲಿ, ಜಾಣ್ಮಯ ಕಥನ ಕಲೆ ಇವುಗಳ ಮೂಲಕ ಪ್ರಿಯವಾಗುತ್ತದೆ. ಸಂಗೀತಗಾರರಲ್ಲದ ಓದುಗರಿಗೂ 'ಸುಸ್ವರ ಅಪಸ್ವರ' ವ್ಯಕ್ತಿಯ, ಕುಟುಂಬದ ಕಥನಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದು ಅರ್ಥದಲ್ಲಿ ಇದು ಐವತ್ತು ವರ್ಷಗಳ ಹಿಂದಿನ ಬೆಂಗಳೂರಿನ ಕಥೆಯನ್ನು ಹೇಳುತ್ತದೆ. ಕಾಲದಲ್ಲಿ ಸಾಂಸ್ಕೃತಿಕ ಬೆಂಗಳೂರನ್ನು ಕಟ್ಟಿದ ಸಂಗೀತ ವಿದ್ವಾಂಸರ ಕಥೆಯನ್ನು ಹೇಳುತ್ತದೆ. ಅಪಸ್ವರಗಳಿಲ್ಲದ 'ಶುದ್ಧ' ಸಂಗೀತಕ್ಕೆ ತುಡಿಯಲು ಹವಣಿಸುತ್ತದೆ. ಇಲ್ಲಿ ಸಂಗೀತ ಲೋಕದ ನೂರಾರು ಸಾಧಕರ, ಬಹು ಎತ್ತರದ ವಿದ್ವಾಂಸರ, ಒಂದು ಕಾಲದ ಮಹಾನ್ ಸಂಗೀತ ಲೋಕದ ಏರಿಳಿವಿನ ಪರಿಚಯವಾಗುತ್ತದೆ. ಸರಳ, ಶ್ರೇಷ್ಠ ಕಲಾವಿದರ ಮೌಲ್ಯ ನಿಷ್ಠೆಯೂ ಗಮನಕ್ಕೆ ಬರುತ್ತದೆ. ಚರಿತ್ರೆ ಎಂದರೆ ದೊಡ್ಡ ದೊಡ್ಡ ರಾಜರ ಚರಿತ್ರೆ ಮಾತ್ರವಲ್ಲ. ಅದು ಎಲ್ಲರ ಬದುಕಿನ, ಹೋರಾಟದ ಚರಿತ್ರೆ; ಸದಭಿರುಚಿಯ ಉತ್ತಮ ಸಮಾಜವನ್ನು ಕಟ್ಟಲು ಕೈಜೋಡಿಸಿದವರೆಲ್ಲರ ಚರಿತ್ರೆ. ಇಂಥ ಚರಿತ್ರೆಯ ಕೆಲವು ಪುಟಗಳಾದರೂ ಇಲ್ಲಿ ಸಿಗುತ್ತವೆಂಬುದು ಸಮಾಧಾನ ತಂದುಕೊಡುತ್ತದೆ.