Product Description
ಕಿರಿಯ ವಯಸ್ಸಿನಲ್ಲೇ ಅಸ್ತಿತ್ವದಲ್ಲಿರುವ ಪ್ರತಿಯೊಂದರ ನಿರ್ದಾಕ್ಷಿಣ್ಯ ವಿಮರ್ಶೆಗೆ ಹೊರಟ ಕಾರ್ಲ್ ಮಾರ್ಕ್ಸ್ ಲೋಕೋತ್ತರವಾದ ಸಿದ್ಧಾಂತವನ್ನು ನಿರೂಪಿಸಿ, ಲೋಕವನ್ನು ವೀಕ್ಷಿಸುವ ದೃಷ್ಟಿಯನ್ನೇ ಆಮೂಲಾಗ್ರವಾಗಿ ಪರಿವರ್ತಿಸಿದರು. ಈ ಜಗತ್ತನ್ನು, ಮಾನವನ ಬಾಳು-ಬದುಕುಗಳನ್ನು ಕುರಿತು ಅನೇಕ ದಾರ್ಶನಿಕರು ಅನೇಕ ಬಗೆಯಿಂದ ಚಿಂತಿಸಿದುದುಂಟು. ಜಗತ್ತನ್ನು ತಿಳಿದುಕೊಳ್ಳುವುದು ಅವರೆಲ್ಲರ ಉದ್ದೇಶವಾಗಿದ್ದರೆ, ಮಾರ್ಕ್ಸ್ ಜಗತ್ತನ್ನೇ ಪರಿವರ್ತಿಸುವ ಸಿದ್ಧಾಂತವನ್ನು ಮುಂದೆ ಮಾಡಿದರು. ಅದು ಸದಾ ಸಂವರ್ಧಿಸುತ್ತಿರುವ ಸಚೇತನ ಸಿದ್ಧಾಂತ. ಜನತೆಯೊಡನೆ, ಶ್ರಮಿಕ, ಮೂಕ, ದಲಿತ ಕೋಟಿಯೊಡನೆ ನಿಕಟ ಸಂಪರ್ಕವಿಟ್ಟುಕೊಂಡು, ಅವರ ಬಾಳ ಬವಣೆಗಳನ್ನು ತಿಳಿದು ಮಾನವ ವಿಮೋಚನೆಯ ಸಂಗ್ರಾಮದಲ್ಲಿ ನಿರತರಾಗಿ, ಆ ಅನುಭವಗಳಿಂದ ತಳೆದ ತೀರ್ಮಾನ, ವೈಚಾರಿಕ ಘರ್ಷಣೆಯಲ್ಲಿ ಪುಟವಿಟ್ಟ ಚಿನ್ನದಂತೆ ಹೊರಬಂದ ಸಿದ್ಧಾಂತ - ಮಾರ್ಕ್ಸ್ವಾದ. ಈ ಅಪ್ರತಿಮ ಪ್ರತಿಭಾವಂತ ಹುಟ್ಟಿದುದು ಜರ್ಮನಿಯಲ್ಲಿ. 1818ರ ಮೇ 5ನೇ ತಾರೀಖು. ಇವರ ಜೀವಿತದುದ್ದಕ್ಕೂ ಸ್ನೇಹಿತ, ಸಂಗಾತಿ, ಸಹಯೋಧ ಆಗಿದ್ದವರು ಫ್ರೆಡರಿಕ್ ಎಂಗೆಲ್ಸ್. 1883ರಲ್ಲಿ ಮಾರ್ಕ್ಸ್ ನಿಧನರಾದಾಗ ಅವರ ಸಮಾಧಿ ಬಳಿ ಭಾಷಣ ಮಾಡಿದ ಎಂಗೆಲ್ಸ್ ಹೀಗೆ ಮಾತು ಮುಗಿಸಿದ್ದರು : ಯುಗ ಯುಗಾಂತರದಲ್ಲೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಅದೇ ಬಗೆಯಾಗಿ ಅವರ ಕೃತಿಗಳೂ ಆಚಂದ್ರಾರ್ಕವಾಗಿ ಉಳಿಯುತ್ತವೆ. ಅಂಥ ಮಹಾ ಪುರುಷನ ಜೀವಿತ, ಸಿದ್ಧಾಂತ, ಕೃತಿಗಳ ಸೂಕ್ಷ್ಮ ಪರಿಚಯ ಈ ಕೃತಿ.