Select Size
Quantity
Product Description
ನಂದಕುಮಾರ್ ಜಿ.ಕೆ ಅವರ ಇನ್ನೊಂದು ಕಥಾಸಂಕಲನ ಬಿಳೆ ದಾಸ್ವಾಳವಾಗಿದೆ. ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತೆಗಳನ್ನಾ ಓದಿದ ನನ್ನ ಅನಿಸಿಕೆ. ಆ ಬೆಲೆಬಾಳುವ ಸರಕುಗಳಲ್ಲಿ ನಾ ಕಂಡ ಒಂದಷ್ಟನ್ನ ನಿಮ್ಮ ಮುಂದೆ ಹಂಚಿಕೊಳ್ಳಬಲ್ಲೇ, ನನ್ನ ಕಣ್ಣಿಗೆ ಕಾಣದೇ ಉಳಿದದ್ದು ಓದುವ ನಿಮಗೆ ಹೊಳೆಸೀತು. ಹಣೆಪಟ್ಟಿ ಹೊತ್ತ ಕತಿ ‘ಬಿಳೇ ದಾಸ್ವಾಳ’. ಹೂವಿನಹಳ್ಳಿ ಅನ್ನೋ ಒಂದು ಊರು, ಆ ಊರಿಗೊಂದು ಹನುಮಪ್ಪನ ಗುಡಿ, ಆ ಗುಡಿಗೊಬ್ಬ ಬಡಪೂಜಾರಿ, ಎಲ್ಲಿ ಹನುಮನೋ ಅಲ್ಲೇ ನಿಂಗಪ್ಪನು ಅನ್ನೋ ಆ ಪೂಜಾರಿಯ ಶುದ್ದಭಕ್ತಿ, ಊರಿನ ದೈವದವರ ನೇಮದ ಕಾರಣದಿಂದ, ಹಾಗೇ ತನ್ನದೇ ನೇಮದ ಕಾರಣದಿಂದ ತಾನು ಆಚರಿಸೋ ಮಡಿ. ಕೆಲಸ ಕೈಬಿಟ್ ಹೋಗ್ತದಂತನೋ, ಮಡಿ ಕೆಟ್ಟರೆ ಭಕ್ತಿಯ ಶುದ್ದತೆ ಹಾಳಾಗತ್ತೆ ಅನ್ನೋಕ್ಕೋಸ್ಕರನೋ ಸಂಕಷ್ಟದ ಸ್ಥಿತಿಯಲ್ಲೂ ಸಂಸಾರವನ್ನೇ ಕಠಿಣವಾಗಿ ಕಾಣೋಕೆ ಹೊರಡೋದು ಬಡಪೂಜಾರಿ. ಆ ನಿಂಗಪ್ಪನ ಮಗಳು ಸಾವಿತ್ರಿಗಾಗಿ ಹೆಣ್ತನವನ್ನೇ ಅರ್ಪಿಸೋ ಬಿಳೇ ದಾಸ್ವಾಳದ ಗಿಡ. ಕತಿಗಾರರೇ ಹೇಳಬೇಕನ್ನೋ ವ್ಯಾಪಕ ಸತ್ಯನಾ ಅನಾವರಣ ಮಾಡಿಬಿಡುತ್ತೆ. ಈ ಕತಿಲೀ ವಿಶಿಷ್ಟವೆನಿಸಿದ್ದೂ ಹೂವಿನ ಗಿಡವೊಂದರ ಬದುಕನ್ನಾ ಹೇಳಿರೋದು, ಅದರಲ್ಲೂ ಅದು ಕಟ್ಟಿಕೊಡೋ ರೂಪಕ ವಿಭಿನ್ನ ಅನ್ನಿಸಿಬಿಡ್ತು. ನಾವು ಕೇವಲವೆನಿಸಿ ಹೊಸಕಿ ಹಾಕೋ, ಕಿತ್ತು ಬಿಸಾಡೋ, ಕಡಿದು ಬಿಸಾಕೋ ಹೂಗಿಡದ ಕತಿಯನ್ನಾ ಸುಂದರ ದುರಂತ ಕತಿಯಾಗಿ ಕಟ್ಟಿಕೊಡೋದು ಸಾಮಾನ್ಯ ಕಲ್ಪನೆಯಲ್ಲಾ. ‘ಗಣಪ್ಪನ ಕತಿ’ಯಲ್ಲಿ ದುರಗ, ಜೋಗವ್ವಾ, ಬಸವಿ, ಒಂದು ಸಮುದಾಯವನ್ನಾ ಪ್ರತಿನಿಧಿಸಿದರೆ, ವ್ಯವಸ್ಥೆ ಎಷ್ಟರ ಮಟ್ಟಿಗೆ ಅವರನ್ನಾ ಶೋಷಿಸುತ್ತದೆಂಬುದನ್ನ ಕತಿ ಗಡದ್ದಾಗಿ ವದರುತ್ತೆ( ಕತಿ ಓದೋರಿಗೆ ಈ ಪದಗಳು ಛಲೋ ಅರ್ಥಾಕವು). ದುರಗ ಪ್ರತಿ ಊರಲ್ಲೂ ಕಾಣಸಿಗ್ತಾನೆ, ಬಹುಶಃ ದೇವರು ಕಂಡರೆ ಈತನ ರೂಪದಲ್ಲೇ ಕಾಣ್ತಾನೇನೋ ಅನ್ನಿಸಿಬಿಡುತ್ತೆ ಅವ್ನ ಮುಗ್ದತೆ. ‘ನವನೀತ’ ಕತಿಯೂ ಕೂಡ, ಅಚಾನಕ್ ಆಗಿ ಬದುಕಲ್ಲಿ ಸಂಭವಿಸೋ ಘಟನೆಗಳು ಮನುಷ್ಯನ ಬದುಕಿನ ಶೈಲಿಯನ್ನಾ ಹೇಗೆಲ್ಲಾ ಬದಲಿಸಿಬಿಡಬಹುದು, ವ್ಯಕ್ತಿ ಹೇಗೆಲ್ಲಾ ಆ ವೈರುಧ್ಯಗಳಿಗೆ ಒಡ್ಡಿಕೊಳ್ಳಬಲ್ಲಾ ಅನ್ನುತ್ತಲೇ ಹೇಗೆಲ್ಲಾ ಒಡ್ಡಿಕೊಳ್ಳಬೇಕು ಅನ್ನೋದನ್ನಾ ತಣ್ಣಗೆ ಮನದ ಮೂಲೆಗೆ ಒಗೆದುಬಿಡುತ್ತೆ. ‘ಸೊನ್ನೆ’ ಕತಿಯಂತೂ ಸರಳವಾಗಿ, ವೀರಭಧ್ರಪ್ಪನೆಂಬ ಸಂಗೀತಗಾರನ ವೈಯಕ್ತಿಕ ಬದುಕಿನ ದುರಂತವನ್ನಾ ಹೆಣೆಯುತ್ತಾ ಕಲಾವಿದರ ಅಶಿಸ್ತು, ಮಾನಸಿಕ ಒತ್ತಡದಲ್ಲಿ ತೊಳಲಾಡೋದು ಆತನನ್ನಾ ದುರಂತ ನಾಯಕನನ್ನಾಗಿಸಿಬಿಡುತ್ತದೆ ಅನ್ನೋದು ಕಲಾವಿದನಾದ ನನಗಂತೂ ತುಂಬ ಹತ್ತಿರವಾಗಿಸಿತು. ಮಠದ ಅಜ್ಜಾರು ವೈರಾಗಿಯಾದರೂ ಕಣ್ಣೀರಿಡುವ ಸಂದರ್ಭವಂತೂ ಆ ಪಾತ್ರದ ವ್ಯಕ್ತಿತ್ವವನ್ನೇ ಎತ್ತರದಲ್ಲಿ ಕೂರಿಸಿಬಿಡುತ್ತದೆ. ಕಡೆಯಲ್ಲಿ ಮಗಾ ಕೇಳೋ ಪ್ರಶ್ನೆಗೆ ಉತ್ತರವೇ ಸಿಗದೇ ಖಾಲಿಯಾಗಿ ಉಳಿಯೋ ಕತಾನಾಯಕನ ದುರಂತ ವಿಚಿತ್ರವಾದ ಆಧ್ಯಾತ್ಮಿಕ ಸತ್ಯವನ್ನಾ ದರ್ಶಿಸುವಂತೆ ಮಾಡಿಬಿಡುತ್ತೆ. ‘ಎಂಟನೇ ಮೈಲಿನ ಗುಡ್ಡಳ್ಳಿ’ ಕತಿ ಕಲ್ಕತ್ತೆಯಿಂದ ಬರೋ ಪೋಸ್ಟ ಮಾಸ್ಟರ್ ಹಾಗೂ ನಿಗೂಢವಾಗಿ ಕಾಣೋ ಭಾಷೆ ಬರದ ಹೆಣ್ಣನ್ನಾ ಊರಿನವರೆಲ್ಲಾ ತಿರಸ್ಕರಿಸೋದು, ವೈಯಕ್ತಿಕ ಬದುಕಿಗೆ ಊರಿನವರು ಹಾಕುವ ನಿಬಂಧನೆಗಳು, ಅಣಕಿಸುವ ಬಗೆಯೆಲ್ಲಾ… ವ್ಯಕ್ತಿಸ್ವಾತಂತ್ರ್ಯ, ಮಾನವೀಯ ಮೌಲ್ಯಕ್ಕೆ ಕೊಡಲಿ ಪೆಟ್ಟಂತಾಗಿ ಕಂಡುಬಿಡುತ್ತೆ. ಆದರೆ ಈ ಕತಿಯಲ್ಲಿ ಬರೋ ಅವರಿಬ್ಬರ (ದುರ್ಗಾ ಮಂಜಣ್ಣ) ಸಂಬಂಧವು, ಅದರಿಂದಾಗೋ ಕತೆಯಲ್ಲಿನ ಬದಲಾವಣೆಗಳಿಗೆ ತಾರ್ಕಿಕವಾದ ಕಾರಣಗಳು ದೊರೆಯದೇ ಹೋದದ್ದು ಕೊಂಚ ಅಸ್ಪಷ್ಟವೆನಿಸಿದಂತೆ ಕಂಡಿತು. ಒಟ್ನಲ್ಲಿ ವ್ಯಾಪಕವಾದ ಸತ್ಯದ ಕತಿಗಳನ್ನಾ ಹೇಳೋಕ್ ಹೊರಟ ನಂದಕುಮಾರರು ಸಮರ್ಥವಾಗಿ ಹೇಳಿಬಿಟ್ಟಿದ್ದಾರೆ. ಎಂದು ರಂಗನಾಥ ಶಿವಮೊಗ್ಗ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
Weight
100 GMS
Length
22 CMS
Width
14 CMS
Height
1 CMS
Author
G K Nandakumar
Publisher
Sapna Book House Pvt Ltd
Publication Year
2022
Number of Pages
65
ISBN-13
9789354563683
Binding
Soft Bound
Language
Kannada