Product Description
ನಮ್ಮ ಬದುಕು ಇಂದು ಸಂಪೂರ್ಣವಾಗಿ ವಿದ್ಯುತ್ತನ್ನೇ ಅವಲಂಬಿಸಿದೆಯೆಂದು ಹೇಳಿದರೆ, ಅದು ಉತ್ಪ್ರೇಕ್ಷೆಯಲ್ಲ. ವಿದ್ಯುತ್ತಿನ ಬಳಕೆ ನಮ್ಮ ಜೀವನದಲ್ಲಿ ಅಷ್ಟು ವ್ಯಾಪಕವಾಗಿದೆ. ಆದ್ದರಿಂದ ವಿದ್ಯುತ್ತು ಎಂದೊಡನೆ,ನಮ್ಮ ಗಮನಕ್ಕೆ ಬರುವುದು ನಾವು ಮನೆಯಲ್ಲಿ ಬಳಸುವ ಪ್ರವಾಹಿ ವಿದ್ಯುತ್ತು. ಪ್ರವಾಹಿ ವಿದ್ಯುತ್ತು ಆವಿಷ್ಕಾರಗೊಂಡಿದ್ದು ಸುಮಾರು ಮುನ್ನೂರು ವರ್ಷಗಳ ಹಿಂದೆ. ಆದರೆ ವಿದ್ಯುತ್ತಿನ ಬಗ್ಗೆ ಕ್ರಿಸ್ತ ಪೂರ್ವದಲ್ಲಿಯೇ ಗ್ರೀಕರಿಗೆ ತಿಳಿದಿತ್ತು. ಅದು ಸ್ಥಾಯಿ ವಿದ್ಯುತ್ತು. ಅವರಿಗೆ ಕಾಂತಗಳ ಬಗ್ಗೆಯೂ ಗೊತ್ತಿತ್ತು. ವಿದ್ಯುತ್ತು ಮತ್ತು ಕಾಂತತ್ವ ಒಂದಕ್ಕೊಂದು ಸಂಬಂಧವಿಲ್ಲದ ಎರಡು ಪ್ರತ್ಯೇಕ ಶಾಖೆಗಳೆಂದು ಅವರು ನಂಬಿದ್ದರು. ಸಾವಿರಾರು ವರ್ಷಗಳ ಕಾಲ ಈ ನಂಬಿಕೆ ಮುಂದುವರಿಯಿತು.ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ಬೆಳವಣಿಗೆಗಳಿಂದ ಈ ನಂಬಿಕೆಗೆ ಬಲವಾದ ಪೆಟ್ಟು ಬಿದ್ದಿತು. ವಿದ್ಯುತ್ಪ್ರವಾಹವು ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆಂದು ಓಅರ್ಸ್ಪೆಡ್ ತೋರಿಸಿಕೊಟ್ಟ. ಇಂದು ನಾವು ತಂತ್ರಜ್ಞಾನದಲ್ಲಿ, ಸಂಪರ್ಕಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಈ ಸಂಶೋಧನೆಗಳು ತಳಹದಿಯಾಗಿವೆ. ಆದ್ದರಿಂದ ವಿದ್ಯುತ್ತು ಮತ್ತು ಕಾಂತತ್ವದ ಮೂಲ ಪರಿಕಲ್ಪನೆಗಳನ್ನು ಮಕ್ಕಳು ಅರ್ಥಮಾಡಿಕೊಳ್ಳುವುದು ಅಗತ್ಯ. ಅವುಗಳನ್ನು ಈ ಪುಸ್ತಿಕೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿವರಿಸಲು ಯತ್ನಿಸಿದೆ. ವಿಷಯ ಬೋಧನೆಗೆ ಅಧ್ಯಾಪಕರಿಗೆ ಮತ್ತು ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಪುಸ್ತಕ ಪ್ರಯೋಜನಕಾರಿಯಾಗುವುದು.