Product Description
ಪ್ರೀತಿ-ಪ್ರೇಮ, ಸಮತೆ-ಸೈರಣೆ, ರೀತಿ-ನೀತಿ ಎಲ್ಲವನ್ನೂ ಬಲಿಗೊಟ್ಟು ಅಮಾನವೀಯ ಕಸಾಯಿ ಖಾನೆಯಾಗಿರುವ ಒಂದು ‘ಧಾರ್ಮಿಕ ಉದ್ಯಮ ಪೀಠ’ ಹಾಗೂ ಅದರ ಅಧಿಪತಿ ಮಾಡುವ ಹಲವಾರು ಭಾನಗಡಿಗಳ ಕುರಿತು ಅತ್ಯಂತ ರೋಚಕವಾಗಿ ಕಥನಿಸುವ ಪೀಠಾಧಿಪತಿಯ ಪತ್ನಿ ಒಂದು ವಿಶಿಷ್ಟ ಕಾದಂಬರಿಯಾಗಿದೆ.
ಪಾಕಿಸ್ತಾನದ ಸೂಫಿ ಪರಂಪರೆಯ ಒಂದು ಪೀಠದ ಅಧಿಪತಿಯ ಬದುಕಿನ ಅಂತರಂಗ ಬಹಿರಂಗಗಳನ್ನು ಬಿಚ್ಚಿಡುವ ಈ ಕಾದಂಬರಿ, ಆ ಪ್ರಕ್ರಿಯೆಯಲ್ಲಿ ಧಾರ್ಮಿಕ ಸೋಗಲಾಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದ ಒಬ್ಬ ಮಹಿಳೆಯ ದುರಂತ ಕಥೆಯನ್ನು ಹೇಳುತ್ತದೆ. ಅವಳ ಕಥೆಯೊಂದಿಗೆ ಹೆಣೆದುಕೊಂಡಿರುವ ಇನ್ನೂ ಅನೇಕ ಅಸಹಾಯಕ ಮುಗ್ಧ ಮಹಿಳೆಯರ ಕಥೆಯನ್ನೂ ಹೇಳುತ್ತದೆ. ಆ ನೆಪದಲ್ಲಿ ಇಡೀ ಪಾಕಿಸ್ತಾನದ, ಅ ಮೂಲಕ ಇಡೀ ಜಗತ್ತಿನ ಧರ್ಮಾಧಿಕಾರಿಗಳು ಹಾಗೂ ರಾಜಕಾರಿಣಿಗಳ ಗೌಪ್ಯ ಒಪ್ಪಂದದ ದುಷ್ಟಕೂಟ ಅಂದರೆ ಪಾಶವೀ ಗುಣಲಕ್ಷಣಗಳ ‘ಚಾಂಡಾಲ ಚೌಕಡಿ’ಯ ಚಿತ್ರಣವನ್ನು ನಿರ್ಲಿಪ್ತತೆಯಿಂದ ಪ್ರಸ್ತುತಪಡಿಸುತ್ತದೆ; ಪುರುಷ ದುರಾಕ್ರಮಣಶಾಹೀ ಸಮಾಜೋ-ಸಾಂಸ್ಕೃತಿಕ ಮೌಲ್ಯಗಳ ಹುದುಲಲ್ಲಿ ಸಿಕ್ಕ ಮಹಿಳೆಯರು ಹೇಗೆ ಕೊನೆಗೂ ಪುರುಷ ಪ್ರಧಾನ ಸಮಾಜದ ಕ್ರೌರ್ಯಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಪೀಠಾಧಿಪತಿಯ ಪತ್ನಿ.
ಆರನೇ ಹೆಂಡತಿಯ ಆತ್ಮಕಥೆ ಬರೆದ ತೆಹೆಮಿನಾ ದುರ್ರಾನಿಯವರು ಅದರಲ್ಲಿ ಪುರುಷಪ್ರಧಾನ ವ್ಯವಸ್ಥೆಯ ರಾಜಕಾರಣದ ಹೂಟ ಹುನ್ನಾರಗಳನ್ನು ಬಿಚ್ಚಿಟ್ಟರೆ, ಈ ಕಾದಂಬರಿಯಲ್ಲಿ ಧಾರ್ಮಿಕ ಲೋಕದ ರಾಡಿ ರಮರಾಡಿಯ ದುರ್ಗಂಧದ ಬಸಿರು ಬಗೆದು ಅದರ ಅಂತರಂಗ ಬಹಿರಂಗಗಳನ್ನು ಜಾಲಾಡಿದ್ದಾರೆ-ಅತ್ಯಂತ ಕಲಾತ್ಮಕವಾಗಿ.