Product Description
ನಾವು ಈಗ ಪ್ರಕಟಿಸುತ್ತಿರುವ ‘ಅಮೆರಿಕನ್ನಡ ಬರಹಗಾರರು’ ಕೈಪಿಡಿ, ಕರ್ನಾಟಕದ ಜನತೆಗೆ ಅಮೆರಿಕದಲ್ಲಾಗುವ ಸಾಹಿತ್ಯ ಬೆಳವಣಿಗೆಯ ಕುರಿತು ಹೆಚ್ಚಿನ ಅರಿವು ಮಾಡಿಕೊಡುವುದೆಂಬ ನಂಬಿಕೆ ನಮ್ಮದು. ತಮ್ಮ ಕೌಶಲ್ಯಗಳನ್ನು ವೃದ್ಧಿಪಡಿಸಿಕೊಳ್ಳಲು ವಲಸೆ ಬಂದ ಕನ್ನಡಿಗರು ತಮ್ಮಲ್ಲಿ ಹುದುಗಿದ್ದ ಸಾಹಿತ್ಯ ಮತ್ತು ಕಲೆಗಳನ್ನೂ ವ್ಯಕ್ತಪಡಿಸಲು ಪ್ರಯತ್ನಿಸಿ, ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಮೊದಲಿಗೆ, ಹಲವು ಬರಹಗಾರರು ಲೇಖನ, ಕವನ, ಕಥೆ, ಮುಂತಾದವುಗಳನ್ನು ಬರೆದು, ಅಮೆರಿಕದ ಕನ್ನಡ ಕೂಟಗಳು ಆಗಾಗ್ಗೆ ಪ್ರಕಟಿಸುತ್ತಿರುವ ಸಂಚಿಕೆಗಳಲ್ಲೂ, ಕರ್ನಾಟಕದ ವಿವಿಧ ಪತ್ರಿಕೆಗಳಲ್ಲೂ ಪ್ರಕಟಿಸಿ, ತಮ್ಮ ಸಾಹಿತ್ಯಾಭಿಮಾನವನ್ನು ವ್ಯಕ್ತಪಡಿಸಿಕೊಂಡರು. ಕ್ರಮೇಣ ಗ್ರಂಥಗಳನ್ನೂ ರಚಿಸಿ, ಪ್ರಕಟಿಸಿದ್ದಾರೆ. ಇದು ಇಲ್ಲಿ ನೆಲೆಸಿದ ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಷಯ! ಇಲ್ಲಿ ಅಂಥ ಲೇಖಕರನ್ನು ಗುರುತಿಸಿ, ಅವರು ಪ್ರಕಟಿಸಿದ ಲೇಖನ ಮತ್ತು ಗ್ರಂಥಗಳನ್ನು ಪಟ್ಟಿ ಮಾಡಿ, ಅವರ ಪರಿಚಯ ಮಾಡುವುದರ ಜೊತೆಗೆ ಅಮೆರಿಕದಲ್ಲಿನ ಸಾಹಿತ್ಯ ಬೆಳವಣಿಗೆಯ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗೆಂದು, beating our own drum (ಸ್ವ-ತುತ್ತೂರಿ) ನಮ್ಮ ಉದ್ದೇಶವಲ್ಲ. ಅಮೆರಿಕದಿಂದ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಗಳು ಪ್ರಕಟವಾಗುತ್ತಿರುವುದು ಅಮೆಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಆದರೆ, ಪ್ರಚಾರವಿಲ್ಲದೆ ಅಂಥ ಗ್ರಂಥಗಳು ಕರ್ನಾಟಕದಲ್ಲಿ ಹೆಚ್ಚಿನವರ ಗಮನಕ್ಕೆ ಬಾರದಿರುವುದಂತೂ ಸತ್ಯ! ಅಮೆರಿಕದಲ್ಲಿದ್ದು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದವರ ಕಿರು ಸೇವೆಯನ್ನು ಪರಿಚಯಿಸುವುದು ಈ ಪ್ರಯತ್ನದ ಹಿಂದಿರುವ ಮುಖ್ಯ ಉದ್ದೇಶ. ಕರ್ನಾಟಕದ ಜನಮಾನಸ ಇದನ್ನು ಗಮನಿಸುವುದೆಂದು ನಂಬಿರುತ್ತೇವೆ.