Product Description
ವಿವರಗಳುಪುಸ್ತಕದ ಬಗ್ಗೆಲೇಖಕರ ಬಗ್ಗೆ
ಪ್ರಾಮಾಣಿಕತೆ ಮತ್ತು ಬದ್ಧತೆಗಳನ್ನು ಮೈಗೂಡಿಸಿಕೊಂಡು ಸಾರ್ವಜನಿಕ ಬದುಕು ನಡೆಸಿದ ಕೆಳಸ್ತರದ ಅನೇಕ ನಾಯಕರು ನೇಪಥ್ಯದಲ್ಲಿಯೇ ಉಳಿದಿದ್ದಾರೆ. ಇಂಥವರ ಹೋರಾಟಗಳನ್ನು ಪ್ರಭುತ್ವ ಉದ್ದೇಶಪೂರ್ವಕವಾಗಿ ಉದಾಸೀನ ಮಾಡುತ್ತಾ ಬಂದಿದೆ. ಈ ಬಗೆಯ ಬದುಕುಗಳನ್ನು ದಾಖಲಿಸುವುದು ಪ್ರಭುತ್ವಕ್ಕೆ ಬೇಡವಾದ ಕೆಲಸ. ಪ್ರಭುತ್ವದ ತಂತ್ರಜ್ಞಾನ, ಚಾಣಾಕ್ಷತನ ಮತ್ತು ಹುಸಿ ಸಂಶೋಧನೆಗಳಿಂದಾಗಿ ಹಲವು ಶೂದ್ರಪ್ರತಿಭೆಗಳು ಚರಿತ್ರೆಯ ಮುಖ್ಯಪುಟಗಳಲ್ಲಿ ಕಾಣಿಸಿಕೊಂಡಿಲ್ಲ.
ಆದರೆ ಚರಿತ್ರೆಯನ್ನು ನೋಡೂವ ಸಬಾಲ್ಟರ್ನ್ ದೃಷ್ಟಿಕೋನದಿಂದಾಗಿ ಅಜ್ಞಾತವಾಗಿ ಉಳಿದಿದ್ದ ಮಹತ್ವದ ವ್ಯಕ್ತಿತ್ವಗಳು ಮತ್ತು ವಿದ್ಯಮಾನಗಳು ಹೊರಗಡೆ ಬರುತ್ತಿವೆ. ಇಂತಹ ಅಧ್ಯಯನಕ್ರಮಗಳಿಂದಾಗಿ ಚರಿತ್ರೆಗೆ ನ್ಯಾಯ ಮತ್ತು ಮನ್ನಣೆ ಸಿಗುತ್ತಿದೆ. ಪರಿಶ್ರಮ ಮತ್ತು ತಾವು ನಂಬಿದ ಸಿದ್ಧಾಂತಗಳಿಂದಲೇ ಬದುಕನ್ನು ಕಟ್ಟಿಕೊಂಡು ಶೂದ್ರ ದಲಿತರ ಬದುಕಿನಲ್ಲಿ ಆತ್ಮಗೌರವ ಹುಟ್ಟು ಹಾಕಲು ಶ್ರಮಿಸಿದ ಎನ್.ಎನ್.ಕಲ್ಲಣ್ಣವರ ಅವರು ಚರಿತ್ರೆಯು ಮರೆತಿರುವ ಮನುಷ್ಯರ ಸಾಲಿಗೆ ಸೇರಿದವರು. ಬಡವರ ಪ್ರತಿನಿಧಿಯಾಗಿದ್ದ ಇವರು ಪ್ರಗತಿಪರ ಆಲೋಚನೆಯ ಕಲಾವಿದರು, ಲೇಖಕರು ಮತ್ತು ವಿದ್ಯಾರ್ಥಿಗಳ ಸಖನಂತಿದ್ದರು.
ಇವರು ತೀರಿಕೊಂಡಾಗ ಕನ್ನಡದ ಧೀಮಂತ ಪತ್ರಕರ್ತರಾದ ಪಿ.ಲಂಕೇಶ್ ಅವರು ಕಲ್ಲಣ್ಣವರ ಬಗ್ಗೆ ಪುಟ್ಟ ಬರಹವೊಂದನ್ನು ಬರೆದು ಅದಕ್ಕೆ ‘ಎಲೆಮರೆಯ ಘಮಘಮ ಹೂವು’ ಎಂಬ ಶೀರ್ಷಿಕೆ ಕೊಟ್ಟಿದ್ದರು. ಈ ತಲೆಬರಹ ಕಲ್ಲಣ್ಣವರ ಒಟ್ಟು ಬದುಕಿನ ರೂಪಕದಂತಿದೆ. ಜಾತಿ, ಮತ, ಪಂಥ ಇತ್ಯಾದಿ ಸಂಕುಚಿತ ಸಂಗತಿಗಳನ್ನು ಮೀರಿದ ಕಲ್ಲಣ್ಣವರ ಮಾನವೀಯತೆಯ ಮಾದರಿಯಾಗಿದ್ದರು.