Select Size
Quantity
Product Description
ಎರೆ ಮಣ್ಣಿನ ಗಾಢ ವಾಸನೆ ಸೂಸುವ, ನೀರು, ಗಾಳಿಗಳ ಆರ್ದ್ರತೆ ಸೋಕಿಸುವ, ಬೆಂಕಿಯ ಬೇಗೆಯನು ಮೂಗಿಗೆ ತಂದು ಉಸಿರುಗಟ್ಟಿಸುವ ಕಥೆಗಳನ್ನು ಬರೆಯುತ್ತಿರುವ ಸಂಗನ ಗೌಡ ಹಿರೇ ಗೌಡ ಅಪರೂಪದ ಪ್ರತಿಭೆಯನ್ನು ದತ್ತವಾಗಿ ಪಡೆದ ಹೊಸ ತಲೆಮಾರಿನ ಕಥೆಗಾರ. ಸ್ಥಳೀಯತೆ ಮತ್ತು ಪ್ರಾದೇಶಿಕತೆಗಳಿಗೆ ಹೊಸ ಅರ್ಥ-ವ್ಯಾಖ್ಯಾನಗಳನ್ನು, ಛಂದಸ್ಸನ್ನು ಕಂಡುಕೊಳ್ಳುವ ಹಠ ತೊಟ್ಟು ಸಾಧಿಸುತ್ತಿರುವ ಛಲಗಾರ.
ಇವರ ಕಥೆಗಳು ಧಾತುವಿನ ಋಣದಲ್ಲಿ ಹುಟ್ಟಿ, ಕೊನೆಗೆ ಮಣ್ಣು ಸೇರಿ ಋಣದ ಬದುಕನ್ನು ತೀರಿಸುವ ಮಣ್ಣಿನ ಮನುಷ್ಯ ಗೊಂಬೆಗಳ ಒಡಲ ಬೇಗುದಿಯನ್ನು, ಸುಖ-ಸಂತೋಷವನ್ನು, ಹಗೆತನ-ಒಗೆತನವನ್ನು, ಪ್ರೇಮ-ಕಾಮ-ಸಂಕಟಗಳನ್ನು ಅತ್ಯಪೂರ್ವ ಪ್ರತಿಮೆ, ರೂಪಕಗಳನ್ನು ಸೃಷ್ಟಿಸಿ ಕಥಿಸುತ್ತವೆ. ಜೀವಜಂಜಾಟದಲ್ಲಿ ಸಾವುನೋವಿಗೆ, ಅಸಹನೀಯ ಅವಮಾನಕ್ಕೆ, ಅಸಂಗತ ಸಂಗತಿಗಳಿಗೆ ತೆರೆದುಕೊಂಡ ಪಾತ್ರಗಳ ಮೂಲಕ ತೆರೆದಿಡುತ್ತವೆ.
ಒಂಬತ್ತು ಕಥೆಗಳಿರುವ ಈ ಸಂಕಲನದ ಪ್ರತಿ ನಿರೂಪಣೆಯೂ ಬಿರುಬಿಸಿಲಿನ ಬಯಲುಸೀಮೆಯಲ್ಲಿ ನಿಸರ್ಗಕೃಪೆಯಂತೆ ಸುರಿವ ಮಳೆಯಲ್ಲಿ ಹುಟ್ಟಿದ ಆಲಿಕಲ್ಲುಗಳಂತೆ ಸ್ಫಟಿಕವಾಗಿವೆ. ಓದುಗ ಮಾಡಬೇಕಿರುವುದು ಅವು ಬೊಗಸೆಯಲ್ಲಿ ಕರಗುವ ಮೊದಲು ಮುತ್ತಿನಂತಹ ಹಳಕುಗಳನ್ನು ಬಾಯಿಗೆ ಹಾಕಿ ಆಸ್ವಾದಿಸಿ, ಹೊಸ ರಸಾನುಭವವನ್ನು ಪಡೆಯುವುದು.
ದಂಪತಿಗಳ ಗಂಧರ್ವ ಪ್ರೇಮ, ಸಾವು-ದುಃಖಾರ್ದ್ರತೆಗಳನ್ನು ʻತಲೆದಿಂಬಿʼನ ರೂಪಕವು ಓದುಗನನ್ನು ಸುತ್ತಿಕೊಳ್ಳುತ್ತದೆ. ಜಗಜಟ್ಟಿಗನ ಸಂದೇಹದ ನಪುಂಸಕ ಪುರುಷಕ್ರೌರ್ಯ ಅರಳಬೇಕಾದ ಹೂವನ್ನು ಹೊಸಕಿ ಹಾಕುವ ದಾರುಣತೆಯನ್ನು ʻಗಾಯದ ಬೆನ್ನುʼ ತೆರೆದು ತೋರಿಸುತ್ತದೆ. ಪವಾಡ ಸದೃಶ್ಯತೆಯನ್ನು ನೆನಪಿಸುವ ʻದಾರʼದ ಸಿಕ್ಕು ಬದುಕಿನ ಅಸಂಗತತೆಯನ್ನು ಚಕಿತಗೊಳ್ಳುವಂತೆ ಅನಾವರಣಗೊಳಿಸುತ್ತದೆ. ʻನುಗಿಸಿಕೊಟ್ಟವರುʼ ಚಿಮ್ಮಿಸುವ ಅಸಂಗತ ದಾರುಣತೆಗೆ ಯಾವ ಹೆಸರಿಡಬಹುದು? ಬೇರೇನು ಹೇಳಬಹುದು: ಇಲ್ಲಿರುವ ಎಲ್ಲ ಕಥೆಗಳೂ ಸಹೃದಯನಿಗೆ ಈವರೆಗೆ ಪಡೆದಿರದ ಓದಿನ ಅನುಭವವನ್ನು ಬಿಗಿದಪ್ಪುವಂತೆ ಮಾಡುತ್ತವೆ.
ಸಂಗನ ಗೌಡರು ಸಾಧಿಸಿರುವ ಕಥನಕುಶಲತೆ, ಭಾಷಾವಿನ್ಯಾಸ, ಕಥಾಪರಿಸರ, ಶೈಲಿ ಮತ್ತು ಕಥನಧ್ವನಿಗಳು ಅವರಿಗಷ್ಟೇ ಒಲಿದಿರುವಂಥವು. ಭವಿಷ್ಯದಲ್ಲಿ ಇನ್ನಷ್ಟು ಕಸುವಿನ, ಮೇಲ್ತಸ್ಥರದ ಕಥೆಗಳನ್ನು ಸಂಗನ ಗೌಡರು ಬರೆಯಬಲ್ಲರು. ಕನ್ನಡ ಕಥಾಲೋಕಕ್ಕೆ ಇದಕ್ಕಿಂತ ಸಂತಸದ ಸಂಗತಿ ಬೇಕಿಲ್ಲ. ʻಮೊಡಚಿಗಳುʼ ತಪ್ಪದೇ ಓದಬೇಕಾದ ಕಥಾ ಸಂಕಲನ.
- ಕೇಶವ ಮಳಗಿ
Weight
300 GMS
Author
Sanganagowda Hirematgouda
Publisher
Harivu Books
ISBN-13
9788197065842
Binding
Soft Bound
Language
Kannada