Product Description
ಯಾವುದೇ ಒಂದು ಜೀವಿಯ ಜೀವಿತಾವಧಿಯಲ್ಲಿ ಅತ್ಯಂತ ಅಪಾಯದ ಸಮಯವೆಂದರೆ, ಹುಟ್ಟಿದ ಮೊದಲ ಕೆಲವು ವರ್ಷಗಳು. ಇದಕ್ಕೆ ಮಾನವರೂ ಕೂಡ ಹೊರತಲ್ಲ. ಅಪಾಯ ಎಂದಾಗ ಅದು ಸಾವಿರಬಹುದು, ವಿವಿಧ ರೀತಿಯ ದೌರ್ಜನ್ಯವಿರಬಹುದು, ಹಿಂಸೆ ಇರಬಹುದು. ವಿಶ್ವದಾದ್ಯಂತ ಪ್ರತೀ ವರ್ಷ ಮಿಲಿಯನ್ಗಟ್ಟಲೆ ಮಕ್ಕಳು ದೌರ್ಜನ್ಯಕ್ಕೆ-ಹಿಂಸೆಗೆ ಬಲಿಯಾಗುತ್ತಿದ್ದಾರೆ. ಮೇಲ್ನೋಟಕ್ಕೆ ತುಂಬಾ ಮಕ್ಕಳು ಸಂತೋಷವಾಗಿ, ಆರೋಗ್ಯವಂತರಾಗಿ, ತಮ್ಮ ಕುಟುಂಬದಲ್ಲಿ ಬಾಳುತ್ತಿರುವಂತೆ ಕಂಡುಬಂದರೂ ಅದೇ ಸಮಯದಲ್ಲಿ, ಹಲವಾರು ಮಕ್ಕಳು ಸಮಾಜದಲ್ಲಿ, ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ನರಳುತ್ತಿರುವುದೂ ಸತ್ಯಸಂಗತಿ. ಬಹಳಷ್ಟು ಬಾರಿ, ತಮಗೆ ತಿಳಿದವರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಈ ಮಕ್ಕಳೆ ಬೆಳೆದು, ನಾಳೆ ನಮ್ಮ ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಬೇಕು. ಮೊಗ್ಗಾಗಿರುವಾಗಲೇ ಚಿವುಟಿ ಹೋಗದಂತೆ, ಹೂಮನ ಬಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಈ ಪುಸ್ತಕ ಮೂಡಿಬಂದಿದೆ.