Product Description
ಮೊದ ಮೊದಲು ಕುತೂಹಲದಿಂದಾಗಿ ಸುರುವಾಗಿ ನಂತರ ಶೋಕಿಯಾಗಿ ತದನಂತರ ಬಿಡಲು ಕಷ್ಟವೇ ಆಗುವ ಚಟವಾಗಿ ಪರಿಣಮಿಸುವ ಧೂಮಪಾನದ ಅಭ್ಯಾಸವು ಮನುಷ್ಯನ ಹೆಗಲೇರಿ ಬಿಗಿಯಾಗಿ ಕುಳಿತುಬಿಡುವ ಅವನ ಶತ್ರುವೇ ಸರಿ. ಸಿಗರೇಟ್, ಬೀಡಿ, ವಗೈರೆಗಳ ಚಟವನ್ನು ಬಿಡಲಾಗದ ಜನರ ಅಸಹಾಯಕತೆ ನಿಜಕ್ಕೂ ಮರುಕ ಹುಟ್ಟಿಸುವಂತಹದು.
ಹೆಸರಾಂತ ವೈದ್ಯರೂ, ಲೇಖಕರೂ ಆದ ಡಾ. ಸಿ.ಜಿ. ಕೇಶವಮೂರ್ತಿಯವರ ಈ ಕೃತಿಯು ಧೂಮಪಾನ ಚಟದಿಂದ ಹುಟ್ಟುವ ಭೀಕರ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಲೇ ಅದರಿಂದ ಬಿಡುಗಡೆಗೊಳ್ಳುವ ಬಗೆಯನ್ನು ಪರಿಣಾಮಕಾರಿಯಾಗಿ ವಿವರಿಸುತ್ತದೆ. ಹೆಚ್ಚುವ ಕಾರ್ಬನ್ ಮೊನಾಕ್ಸೈಡಿನ ಪ್ರತಾಪ, ಆಮ್ಲಜನಕ ಧಾರಣೆ - ಸಾಗಾಣಿಕೆಯ ಪ್ರಮಾಣದಲ್ಲಿ 8 ಪಟ್ಟಿನಷ್ಟು ಕುಗ್ಗುವಿಕೆ, ಉಂಟಾಗುವ ವಿಟಮಿನ್ಗಳ ಕೊರತೆ, ಎಂಫೈಸೀಮಾ ಎಂಬ ಶ್ವಾಸಕೋಶ ರೋಗದ ಹುಟ್ಟು, ಧೂಮದಲ್ಲಿನ ಟಾರ್ನಿಂದಾಗಿ ಶ್ವಾಸಕೋಶಗಳಿಗೆ ಮೆತ್ತಿಕೊಳ್ಳುವ ಕ್ಯಾನ್ಸರ್ ಲೇಪನ, ಹೃದಯದ ರೋಗಗಳು - ಪಾರ್ಶವಾಯುವಿನಂತಹ ವ್ಯಾಧಿಗಳ ಪೀಡನೆ, ಏದುಸಿರು ಸುರುವಾಗಿ ಕೊನೆಗೆ ಹೃದಯಾಘಾತದಲ್ಲಿ ಪರ್ಯವಸಾನಗೊಳ್ಳುವಂತಹ ವಿಷಾದದ ಪ್ರಸಂಗ - ಇವೆಲ್ಲವೂ ಧೂಮಪಾನದಿಂದಾಗಿ ಎನ್ನುವ ಲೇಖಕರು ಧೂಮದಾಸ್ಯದಿಂದ ಹೊರಬರುವ ಬಗೆಯನ್ನು ಸರಳವಾಗಿ ಮನಕ್ಕೆ ತಾಗುವ ರೀತಿಯಲ್ಲಿ ವಿವರಿಸುತ್ತಾರೆ.
ಧೂಮಪಾನದ ದಾಸ್ಯದಿಂದ ಹೊರಬರಲು ಬಯಸುತ್ತಿರುವ ಎಲ್ಲರಿಗೂ ಈ ಪುಸ್ತಕ ಬಹು ಉಪಕಾರಿ.