Product Description
ಜೆನ್ ಪದ ಸಂಸ್ಕೃತದ ‘ಧ್ಯಾನ’ ಪದಕ್ಕೆ ಸಂವಾದಿಯಾಗಿದೆ. ಚಾನ, ತಿಯೆನ್, ಸಿಯಾನ್, ಝಾನ - ಇವು ಪ್ರಾದೇಶಿಕ ಭಾಷಾರೂಪಗಳು. ಜೆನ್ ಬೌದ್ಧಮತದ ಒಂದು ಶಾಖೆ. ಶಾಕ್ಯಮುನಿ ಬುದ್ಧಗುರುವಿನಿಂದ ಬೋಧಿಧರ್ಮನವರೆಗೂ ಸಾವಿರಾರು ವರ್ಷಗಳಿಂದ ಕವಲೊಡೆಯುತ್ತ ವಿಸ್ತರಿಸಿಕೊಂಡು ವಿಕಾಸಗೊಳ್ಳುತ್ತ ಸಾಗಿದ ಈ ಪಂಥದ ಸುದೀರ್ಘ ಪಯಣವೇ ಮಹಾಯಾನ. ‘ಧರ್ಮವಲ್ಲದ ಧರ್ಮ - ಉಪದೇಶವಿಲ್ಲದ ಮೌನ’ ಎಂಬುದೇ ಇದರ ಹಿರಿಮೆ. ಜೆನ್ ಇತರ ಧರ್ಮಗಳಂತೆ ನಿಂತ ನೀರಾಗದೆ ಸದಾ ಹರಿಯುತ್ತ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಅದು ಏನನ್ನು ಹೇರುವುದಿಲ್ಲ. ಇದು ಒಂದು ಧರ್ಮವಲ್ಲ, ಬದುಕುವ ವಿಧಾನ ಅಷ್ಟೆ. ಆಳುವ ಚಕ್ರವರ್ತಿಗಳನ್ನೂ ಸೆಳೆದುಕೊಂಡಿದ್ದು ಜೆನ್ ಸಾಧನೆ. ಉಪನಿಷತ್ತುಗಳು ಹೇಳಿದ ಅರಳುವ ವೈಭವ, ನಶಿಸುವ ನಶ್ವರತೆ ಜೆನ್ ಕಂಡುಕೊಂಡಿದೆ. ಬೌದ್ಧಮತದ ಮೂಲ ಭಾರತವೇ ಆದರೂ ಇಲ್ಲಿನ ವೈದಿಕರ ಕೆಂಗಣ್ಣಿಗೆ ಬಲಿಯಾಗಿ ಗಡಿದಾಟಿ ನೆರೆರಾಜ್ಯಗಳಲ್ಲಿ ನೆಲೆನಿಂತು ಇಂದಿಗೂ ವಿಕಾಸದ ಪಥದಲ್ಲಿದೆ. ಯಾವ ಕೆಲಸವೇ ಆಗಲಿ, ಸಂಪೂರ್ಣ ಸಮರ್ಪಣಾಭಾವದಿಂದ ಮಾಡಿದಾಗ ಅದುವೇ ಜೆನ್...ಜೆನ್ ಚರಿತ್ರೆಯ ವಿಮರ್ಶಾತ್ಮಕ ನೋಟವಿದು.
ಇವರು ಹೇಳುವ ಧರ್ಮಶಾಸ್ತ್ರಗಳು ಎಂದರೆ ಯಾವುವು? ಮೊದಲು ಬೌದ್ಧಮತದಲ್ಲಿ ಧರ್ಮಗ್ರಂಥಗಳು ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದಲ್ಲವೆ? ಜೆನ್ ನವರು ಹೇಳುವ ಶಾಸ್ತ್ರಗಳ ನಿರವಲಂಬನ ಎಂದರೇನು? ಬೌದ್ಧಮತದಲ್ಲಿ ಬುದ್ಧನೇ ಹೇಳಿದ “ಧರ್ಮ ಎನ್ನುವ ವಸ್ತುವೊಂದಿತ್ತೆ?” ಎಂದು ಮಹಾಕಶ್ಯಪನಿಗೆ ಕೇಳಿದನೆನ್ನುವ ಮಾತು ಇಲ್ಲಿ ಬಂದಿದೆ. ಪುಷ್ಪ ಪ್ರವಚನ - ಮೌನ ಸಂಕೇತ ಎನ್ನುತ್ತಾರೆ. ಮೌನ ಸಂಭಾಷಣೆ ಶ್ರೇಷ್ಠ ಎನ್ನುತ್ತಲೇ ಸಾವಿರಾರು ಬೋಧನೆ, ಪ್ರವಚನ, ಪ್ರಾರ್ಥನೆ ಮಾಡುತ್ತಾರೆ.